ಬೆಂಗಳೂರು : ರಾಜ್ಯ ಸರ್ಕಾರವು ಪತ್ರಕರ್ತರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಪತ್ರಕರ್ತರಿಗೆ ‘ನಿವೇಶನ ಭಾಗ್ಯ’ ಕಲ್ಪಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಜೆ.ಎನ್.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ 2023 ಹಾಗೂ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ಅಥವಾ ಖಾಸಗಿ ಲೇಔಟ್ ಗಳಲ್ಲಿ ಎಲ್ಲಾದರೂ ಸರಿ ಒಂದು ನಿವೇಶನ ಕಲ್ಪಿಸಲು ಸರ್ಕಾರವು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಿದೆ ಎಂದು ಭರವಸೆ ನೀಡಿದರು.
ಪತ್ರಿಕಾ ರಂಗ ಎಂಬುದು ಸಮಾಜದ ನಾಲ್ಕನೇ ಅಂಗವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಷ್ಟೇ ಪತ್ರಿಕಾರಂಗವೂ ಪ್ರಮುಖವಾಗಿದೆ. ಸ್ವಸ್ಥ ಸಮಾಜ ಕಟ್ಟಲು ದಿನ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಹಗಲಿರುಳು ಕೆಲಸ ಮಾಡುತ್ತಿವೆ. ಈ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಎಲ್ಲಾ ಪತ್ರಕರ್ತ ಮಿತ್ರರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ರಾಜಕಾರಣ ಮತ್ತು ಪತ್ರಿಕಾ ರಂಗ ಬೇರ್ಪಡಿಸಲು ಸಾಧ್ಯವಿಲ್ಲ. ಪತ್ರಿಕೆ ಇಲ್ಲದೆ ರಾಜಕಾರಣ ನಡೆಯಲ್ಲ. ಸರ್ಕಾರ ನಿರ್ಣಯಗಳನ್ನು ತೆಗೆದುಕೊಂಡರೂ ಅದನ್ನು ಜನರಿಗೆ ಮುಟ್ಟಿಸಲು ಪತ್ರಿಕೆಗಳು ಬೇಕು. ಹಾಗಾಗಿ ಜನ ಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ವರದಿ ಬಿತ್ತರಿಸುವ ಮೂಲಕ ಪತ್ರಿಕೆಗಳು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತಿವೆ. ಅಲ್ಲದೆ ಸಮಾಜದ ಬದಲಾವಣೆಯಲ್ಲಿ, ಜ್ಞಾನ ಹೆಚ್ಚಿಸುವಲ್ಲಿ, ಭಾಷೆ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪತ್ರಕರ್ತರನ್ನು ಗೌರವಿಸುತ್ತಿರುವ ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದ್ದಾರೆ.