ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿರುವ ರಾಜ್ಯದ ಗ್ರಾಮಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹಾಗೂ 2, ಮತ್ತು ದ್ವಿತೀಯ ದರ್ಜೆ ಲೆಕ್ಕಸಹಾಯಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ವರ್ಗಾವಣೆ ಕೌನ್ಸೆಲಿಂಗ್ ವೇಳಾಪಟ್ಟಿ ನಿಗದಿಯಾಗಿದೆ.
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ಶೇ.9 ಕಡ್ಡಾಯ ಸಾರ್ವಜನಿಕ ಹಿತಾಸಕ್ತಿ, ಸಾಮಾನ್ಯ ಕೋರಿಕೆ ವರ್ಗಾವಣೆ ಹಾಗೂ ಶೇ.6 ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಜೂ.23ರಿಂದ ಜು.28ರವರೆಗೆ ನಡೆಯಲಿದೆ ಎಂದಿದ್ದಾರೆ.
ವರ್ಗಾವಣೆ ಹಾಗೂ ವಿಸ್ತರಣೆಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ ಜೂ.23. ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಜೂ.24ಕ್ಕೆ ಪ್ರಕಟವಾಗಲಿದೆ. ಅರ್ಹರು ಹಾಗೂ ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿಗೆ ಆಯಾ ಜಿಪಂ ಸಿಇಒಗೆ ಅಪೀಲ್ ಸಲ್ಲಿಸಲು ಜೂ.26 ಕಡೇ ದಿನವಾಗಿದ್ದು, ಅಂತಿಮ ಪಟ್ಟಿ ಜೂ.30ಕ್ಕೆ ಪ್ರಕಟವಾಗಲಿದೆ. ತಿರಸ್ಕೃತ ವರ್ಗಾವಣೆ, ವಿಸ್ತರಣೆ ಅರ್ಜಿಗಳಿಗೆ ಅಪೀಲು ಸಲ್ಲಿಸಲು ಜು.9 ಕೊನೇ ದಿನ. ಸಾರ್ವಜನಿಕ ಹಿತಾಸಕ್ತಿಯ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿ ಹಾಗೂ ವಿಶೇಷ ಪ್ರಕರಣಗಳ ಅಂತಿಮ ವರ್ಗಾವಣೆ ಆದ್ಯತಾ ಪಟ್ಟಿ ಜು.16 ಮತ್ತು ಪತಿ ಪತ್ನಿ ಪ್ರಕರಣದಡಿ ಅಂತರ್ ಜಿಲ್ಲಾ ವರ್ಗಾವಣೆಗೆ ಆದ್ಯತಾ ಪಟ್ಟಿ ಜು.18ರಂದು ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.