ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಜನೌಷಧಿ ಮಾದರಿಯಲ್ಲೇ ಪ್ರಾಣಿಗಳಿಗೆ ದನೌಷಧಿ ಯೋಜನೆ ಜಾರಿಗೆ ತರಲು ಮುಂದಾಗಿದೆ.
ಹೌದು, ಕೇಂದ್ರ ಸರ್ಕಾರವು ಇದೀಗ ಜಾನುವಾರುಗಳಿಗೆ ಅಗತ್ಯ ಔಷಧಗಳನ್ನು ಜನೆರಿಕ್ ಮಾದರಿಯಲ್ಲಿ ಬಿಡುಗಡೆಗೆ ನಿರ್ಧರಿಸಿದ್ದು, ಈ ಮೂಲಕ ರೈತರಿಗೆ ಅಗ್ಗದ ದರದಲ್ಲಿ ಔಷಧ ಪೂರೈಸಲಿದೆ. ಕೇಂದ್ರ ಸರ್ಕಾರದ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಇನ್ಮುಂದೆ ಜಾನುವಾರುಗಳಿಗೆ ಕೊಡುವ ಗುಣಮಟ್ಟದ ಜನೆರಿಕ್ ಔಷಧಗಳನ್ನು ರೈತರಿಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ ಎಚ್ ಡಿಸಿ ಯೋಜನೆಗೆ ಪಶು ಔಷಧಿ ಎಂಬ ಅಂಶವನ್ನು ಹೊಸದಾಗಿ ಸೇರಿಸಲಾಗಿದೆ. ಎಲ್ ಎಚ್ ಡಿಸಿ ಯೋಜನೆಗೆ ಬಜೆಟ್ ನಲ್ಲಿ 3,880 ಕೋಟಿ ರೂ. ಮೀಸಲಿಡಲು ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.