ಬೆಂಗಳೂರು : ನೀರಾವರಿ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ರಚಿಸುವ ಸಂಬಂಧ ರೈತರಿಗೆ ಅನುಕೂಲವಾಗುವಂತೆ ಜಾರಿಗೊಳಿಸುವ ಬಗ್ಗೆ “ನವೀಕೃತ ಶೀಘ್ರು ಸಂಪರ್ಕ ಯೋಜನೆ” ಜಾರಿಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ, ರೈತರ ನೀರಾವರಿ ಪಂಪ್ ಸೆಟ್ ಗಳಿಗೆ ಮೂಲಸೌಕರ್ಯ ರಚಿಸುವ ನಿಟ್ಟಿನಲ್ಲಿ ದಿನಾಂಕ 14.7.2014 ರ ಸುತ್ತೋಲೆಯಲ್ಲಿ ಶೀಘ್ರ ಸಂಪರ್ಕ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಅದರಂತೆ ರೂ.10,000 ಮತ್ತು ಠೇವಣಿ ಹಣ ಪಾವತಿಯೊಂದಿಗೆ, ರೈತರು ಇಚ್ಚಿಸಿದಲ್ಲಿ, ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವಂತೆ ಮತ್ತು ಅವಶ್ಯಕತೆಗೆ ತಕ್ಕಂತೆ 25 KVA ಪರಿವರ್ತಕವನ್ನು ವಿಸಕಂಗಳು ಒದಗಿಸಲು ಅವಕಾಶ ಕಲ್ಪಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ, ನೀರಾವರಿ ಪಂಪ್ ಸೆಟ್ ಗಳನ್ನು ವ್ಯವಸ್ಥಿತವಾಗಿ ವಿದ್ಯುತ್ ಜಾಲಕ್ಕೆ ಸೇರ್ಪಡಿಸಲು ಮತ್ತು ಹಗಲಿನ ವೇಳೆಯಲ್ಲಿಯೇ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸುವ ದೃಷ್ಟಿಯಿಂದ ದಿನಾಂಕ 22.9.2023ರ ಅಂತ್ಯಕ್ಕೆ ನೋಂದಣಿಗೊಂಡು ವಿದ್ಯುತ್ ಮೂಲಸೌಕರ್ಯಕ್ಕೆ ಬಾಕಿ ಇದ್ದ ಅರ್ಜಿಗಳ ಪೈಕಿ ಮತ್ತು ಹೊಸದಾಗಿ ನೋಂದಣಿಗೊಳ್ಳುವ ಅರ್ಜಿಗಳ ಪೈಕಿ ಕೊಳವೆಬಾವಿಗಳು ಹಾಲಿ ಇರುವ ವಿದ್ಯುತ್ ಜಾಲದಿಂದ 500 ಮೀಟರ್ ದೂರವಿದ್ದಲ್ಲಿ, Stand alone/off grid Solar pump ಕೇಂದ್ರ ಸರ್ಕಾರದ ಸಹಾಯಧನ 30% ಮತ್ತು ರಾಜ್ಯ ಸರ್ಕಾರದ ಸಹಾಯಧನ 50% ರೊಂದಿಗೆ ಸೌರ ಪಂಪ್ ಅಳವಡಿಸಲು, 500 ಮೀಟರ್ ಒಳಗಿದ್ದಲ್ಲಿ ವಿದ್ಯುತ್ ಮೂಲಸೌಕರ್ಯವನ್ನು ವಿಸಕಂಗಳು ರಚಿಸಲು ಹಾಗೂ ಹೊಸದಾಗಿ ನೋಂದಣಿಗೊಳ್ಳುವ ರೈತರು ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ವಿದ್ಯುತ್ ಮೂಲಸೌಕರ್ಯ ರಚಿಸಿಕೊಳ್ಳಲು, ದಿನಾಂಕ 22.9.2023 ರ ಸಚಿವ ಸಂಪುಟ ಅನುಮೋದನೆಯಂತೆ, ದಿನಾಂಕ 7.10.2023 ರಂದು ಆದೇಶ ಹೊರಡಿಸಲಾಗಿದೆ ಮತ್ತು ಈ ಆದೇಶದ ಹಿಂದೆ ಚಾಲ್ತಿಯಲ್ಲಿದ್ದ ಎಲ್ಲಾ ಆದೇಶ, ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ನಡವಳಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಶೀಘ್ರು ಸಂಪರ್ಕ ಯೋಜನೆಯ ಮಾದರಿಯನ್ನು ತಾಂತ್ರಿಕ ಮತ್ತು ಆರ್ಥಿಕ ಸಾಧಕ ಭಾಧಕಗಳನ್ನು ಪರಿಶೀಲಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲಾ ವಿಸಕಂಗಳಿಗೆ ಸೂಚಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (4) ರಿಂದ (8) ರಲ್ಲಿ ಶೀಘ್ರ ಸಂಪರ್ಕ ಯೋಜನೆ ವಿಧಾನ ಜಾರಿಗೊಳಿಸಿದಲ್ಲಿ ಹೆಚ್ಚಿನ ರೈತರು ಮೂಲಸೌಕರ್ಯ ರಚಿಸಿಕೊಳ್ಳಲಿದ್ದು, ವಿಸಕಂಪನಿಗಳು ಪರಿವರ್ತಕವನ್ನು ಮಾತ್ರ ಒದಗಿಸಬೇಕಾಗಿರುವುದರಿಂದ, ದಿನಾಂಕ 22.9.2023 ರ ಅಂತ್ಯಕ್ಕೆ ನೋಂದಣಿಗೊಂಡು ಮೂಲಸೌಕರ್ಯ ರಚನೆಗೆ ಬಾಕಿ ಇರುವ ಮತ್ತು ಹೊಸದಾಗಿ ನೋಂದಣಿಗೊಳ್ಳುವ ಕೃಷಿ ಪಂಪ್ ಸೆಟ್ ಅರ್ಜಿದಾರರಿಗೆ ಅನುಕೂಲವಾಗುವಂತೆ ಮತ್ತು ಅನಧಿಕೃತ ಸಂಪರ್ಕವನ್ನು ನಿಯಂತ್ರಿಸುವ ದೃಷ್ಟಿಯಿಂದ ಶೀಘ್ರ ಸಂಪರ್ಕ ಯೋಜನೆ ವಿಧಾನವನ್ನು ಜಾರಿಗೊಳಿಸುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಕೆಳಕಂಡ ಆದೇಶ
ರೈತರ ನೀರಾವರಿ ಪಂಪ್ ಸೆಟ್ ಗಳ ವಿದ್ಯುದೀಕರಣ ಕಾಮಗಾರಿಯನ್ನು ಅಗತ್ಯವಿರುವ ವಿದ್ಯುತ್ ಮೂಲ ಸೌಕರ್ಯದೊಂದಿಗೆ ಶೀಘ್ರುವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಳಕಂಡ ಷರತ್ತುಗಳೊಂದಿಗೆ “ನವೀಕೃತ ಶೀಘ್ರ ಸಂಪರ್ಕ ಯೋಜನೆ” ಜಾರಿಗೊಳಿಸಿ ಆದೇಶಿಸಿದ:
1) ನವೀಕೃತ ಶೀಘ್ರ ಸಂಪರ್ಕ ಯೋಜನೆ (New SSY)
i. ದಿನಾಂಕ 22.9.2023 ಕ್ಕೂ ಮುನ್ನ ನೋಂದಣಿಗೊಂಡು ಮತ್ತು ಅಗತ್ಯ ಶುಲ್ಕ ಮತ್ತು ಠೇವಣಿ ಪಾವತಿಸಿ ವಿದ್ಯುತ್ ಮೂಲಸೌಕರ್ಯ ರಚಿಸಲು ಬಾಕಿಯಿರುವ ಪಂಪ್‌ಸೆಟ್‌ಗಳಿಗೆ ರೈತರು ಇಚ್ಚಿಸಿದಲ್ಲಿ HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವುದು ಮತ್ತು ವಿಸಕಂಗಳ ವೆಚ್ಚದಲ್ಲಿ ಸೂಕ್ತ ಸಾಮರ್ಥ್ಯದ ಪರಿವರ್ತಕವನ್ನು 2 ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್‌ಸೆಟ್‌ಗಳನ್ನು ಒಟ್ಟುಗೂಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒದಗಿಸುವುದು.
ii. ದಿನಾಂಕ 22.9.2023ರ ನಂತರ ನೋಂದಣಿಗೊಂಡ /ನೋಂದಣಿಗೊಳ್ಳುವ ಪಂಪ್‌ಸೆಟ್‌ಗಳಿಗೆ ರೈತರು ಇಚ್ಚಿಸಿದಲ್ಲಿ HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ರೂ.15,000/- ಮತ್ತು KERC ನಿಯಮಾವಳಿಗಳಂತೆ ಠೇವಣಿ ಹಣವನ್ನು ವಿಸಕಂಗಳಿಗೆ ಪಾವತಿ ಮಾಡುವುದರೊಂದಿಗೆ, ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ಮೂಲಸೌಕರ್ಯ ರಚಿಸಿಕೊಳ್ಳುವುದು ಮತ್ತು ವಿಸಕಂಗಳ ವೆಚ್ಚದಲ್ಲಿ ಸೂಕ್ತ ಸಾಮರ್ಥ್ಯದ ಪರಿವರ್ತಕವನ್ನು, 2 ಅಥವಾ ಹೆಚ್ಚಿನ ಸಂಖ್ಯೆಯ ರೈತರ ಪಂಪ್‌ಸೆಟ್‌ಗಳನ್ನು ಒಟ್ಟುಗೂಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಒದಗಿಸುವುದು.
2) ದಿನಾಂಕ 22.9.2023 ರ ನಂತರದಲ್ಲಿ ನೀರಾವರಿ ಪಂಪ್‌ಸೆಟ್‌ಗಳು ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಸ್ವಯಂ ಕಾರ್ಯನಿರ್ವಹಣೆಯಡಿ (Self- execution) ಕಾಮಗಾರಿ ಕೈಗೊಳ್ಳುವುದು ಇಲ್ಲದಿದ್ದಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ (New SSY) ಕಾಮಗಾರಿ ಕೈಗೊಳ್ಳುವುದು. ಇದಕ್ಕೆ ಹೊರತುಪಡಿಸಿ, ಯಾವುದೇ ನೀರಾವರಿ ಪಂಪ್‌ಸೆಟ್‌ಗಳು ವಿದ್ಯುತ್ ಜಾಲದಿಂದ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಹೊಂದಿದ್ದಲ್ಲಿ, ಅವುಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ ವಹಿಸಿ, ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದರ ಜೊತೆಗೆ ನಿಯಮಾನುಸಾರ ಕ್ರಮವಹಿಸುವುದು.
3) HT ಮತ್ತು LT network ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳುವಾಗ, ಪರಿವರ್ತಕದಿಂದ LT ಮಾರ್ಗವನ್ನು ಕೇವಲ ಒಂದು ಅಥವಾ ಎರಡು Span ಗೆ ಸೀಮಿತಗೊಳಿಸುವುದು.
4) ಶೀಘ್ರ ಸಂಪರ್ಕ/ ನವೀಕೃತ ಶೀಘ್ರ ಸಂಪರ್ಕ ದಲ್ಲಿ ಒದಗಿಸಿದ ಪರಿವರ್ತಕಗಳಲ್ಲಿ ತಾಂತ್ರಿಕ ಕಾರ್ಯ ಸಾಧ್ಯತೆಯಿದ್ದಲ್ಲಿ ಇತರೆ/ಮುಂಬರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ವಿಸಕಂಗಳು ಅಧಿಕಾರವನ್ನು ಹೊಂದಿರುತ್ತವೆ. ವಿಸಕಂಗಳ ವ್ಯಾಪ್ತಿಯಲ್ಲಿ ರೈತರ ಪಂಪ್ ಸೆಟ್ ಗಳ ಅರ್ಜಿ ನೋಂದಣಿಯಾಗಿದ್ದು, ಅವು ಹಾಲಿ ಇರುವ ಪರಿವರ್ತಕದ ಸಮೀಪದಲ್ಲಿದ್ದು ಪರಿವರ್ತಕದಲ್ಲಿ ಈ ಪಂಪ್ ಸೆಟ್‌ನ/ಪಂಪ್ ಸೆಟ್‌ಗಳ ಹೊರೆಯನ್ನು ನಿರ್ವಹಿಸಲು ಸಾಧ್ಯವಿದ್ದಲ್ಲಿ, ಆ ಪರಿವರ್ತಕದಿಂದಲೇ ವಿದ್ಯುತ್ ಸಂಪರ್ಕ ನೀಡುವುದು.
5) HT/LT network ವಿಸ್ತರಣೆ ಕಾಮಗಾರಿಗಳನ್ನು ರೈತರು ಸ್ವಯಂ ಕಾರ್ಯ ನಿರ್ವಹಣೆ (Self-execution) ಮತ್ತು ನವೀಕೃತ ಶೀಘ್ರ ಸಂಪರ್ಕ ಯೋಜನೆಯಡಿ (New SSY) ಕೈಗೊಂಡಾಗ ಅಂದಾಜು ಪಟ್ಟಿಯ ಒಟ್ಟು ವೆಚ್ಚದ ಮೇಲೆ ವಿಧಿಸಲಾಗುವ ಮೇಲ್ವಿಚಾರಣಾ ಶುಲ್ಕವನ್ನು (Supervision Charges) ಮನ್ನಾ ಮಾಡುವುದು.
6) ತಾಂತ್ರಿಕ ಸಾಧ್ಯತೆಯಿರುವಲ್ಲಿ, ಹಾಲಿ ಇರುವ LT ಜಾಲದಿಂದ Service main ಮೂಲಕ ಅಥವಾ LT ಮಾರ್ಗ ವಿಸ್ತರಣೆಯೊಂದಿಗೆ ಸ್ವಯಂ ಕಾರ್ಯ ನಿರ್ವಹಣೆ ಅಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆಯುವ ರೈತರು ಸಹ ರೂ.15,000/- ಮತ್ತು ಠೇವಣಿ ಹಣ ಪಾವತಿಸುವುದು. ಅಂತಹ ರೈತರು ನವೀಕೃತ ಶೀಘ್ರ ಸಂಪರ್ಕ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
7) ಮೇಲೆ ತಿಳಿಸಿದ ಯಾವುದೇ ವಿಧಾನದ ಕಾಮಗಾರಿಯ ಅಂದಾಜುಪಟ್ಟಿಯನ್ನು ಸಂಬಂಧಿಸಿದ ಶಾಖಾಧಿಕಾರಿಗಳೇ ನಿಯಮಾನುಸಾರ Techno-economic feasibility ಪ್ರಕಾರ ಸಿದ್ಧಪಡಿಸಿರುವ ಬಗ್ಗೆ ಸಂಬಂಧಿತ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (AEE(EI)) ಯವರು ಖಾತ್ರಿಪಡಿಸಿಕೊಳ್ಳುವುದು. ಈ ಪ್ರಕ್ರಿಯೆಯನ್ನು ಕಂಪನಿ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸುವುದು.
ಈ ಮೇಲಿನ ಅಂಶಗಳನ್ನು ದಿನಾಂಕ 7.10.2023 ರ ಸರ್ಕಾರಿ ಆದೇಶದ ಕಂಡಿಕೆ (3) ರಂತೆ ವಿದ್ಯುತ್ ಜಾಲದಿಂದ 500 ಮೀ ಒಳಗೆ ಬರುವ ರೈತರ ಪಂಪಸೆಟ್ಟುಗಳಿಗೆ ಸೀಮಿತಗೊಳಿಸಿದೆ.