ಹಾಸನ : ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಂತರ ಕರ್ನಾಟಕದ ಕಾಫಿಯನ್ನು ಚಿನ್ನದ ಮತ್ತೊಂದು ರೂಪವಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಕಾಫಿ ಬೆಳೆಗಾರರ ಒಕ್ಕೂಟ ಆಯೋಜಿಸಿದ್ದ ಕಾಫಿ ಬೆಳೆಗಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2011ರಿಂದ ಸ್ಥಗಿತಗೊಂಡಿದ್ದ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಮರು ಅನುಷ್ಠಾನಗೊಳಿಸಲಾಗಿದ್ದು, ಕಾಫಿ ಗುಣಮಟ್ಟ ಹಾಗೂ ಯಾಂತ್ರೀಕರಣಕ್ಕೆ ಒತ್ತು ನೀಡಲಾಗುವುದು.ರೈತ ಉತ್ಪಾದಕ ಕಂಪನಿಗಳ ಮೂಲಕ ಅಗತ್ಯ ಪರಿಕರಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಗೋಯಲ್ ಹೇಳಿದರು.
ಕಾಫಿ ಅಭಿವೃದ್ಧಿಯಲ್ಲಿ ಸ್ಟಾರ್ಟಪ್‌ಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. ಬಾಳೆಹೊನ್ನೂರಿನಲ್ಲಿ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯ ಅನುದಾನ ನೀಡಲು ಕೇಂದ್ರ ಬದ್ಧವಾಗಿದೆ ಎಂದು ತಿಳಿಸಿದರು. ಕಾಫಿ ಬೆಳೆಗಾರರಿಗೆ ಸಹಾಯಧನ ನೀಡಲು 100 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು. ಸಲ್ಲಿಸಿದ 21,000 ಅರ್ಜಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಗೋಯಲ್ ಹೇಳಿದರು.
ಈ ಪ್ರದೇಶದಲ್ಲಿನ ಮಾನವ-ಪ್ರಾಣಿ ಸಂಘರ್ಷದ ಕುರಿತು ಮಾತನಾಡಿದ ಗೋಯಲ್, ಐಐಎಸ್‌ಸಿ ಬೆಂಗಳೂರು ಪ್ರೊಫೆಸರ್ ಸುರೇಂದ್ರ ವರ್ಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಮತ್ತು ವರದಿಯನ್ನು ಪಡೆಯಲಾಗುವುದು ಎಂದು ಹೇಳಿದರು. ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಆನೆ ಕಾರಿಡಾರ್ ಕುರಿತು ಕೇಂದ್ರ ಪರಿಸರ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು, ಸಂಸದರು, ಶಾಸಕರು, ಹೆಚ್ ಡಿ ಕುಮಾರಸ್ವಾಮಿ ಮತ್ತು ನಾನು ಮಾತುಕತೆ ನಡೆಸುತ್ತೇವೆ, ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಉಪಗ್ರಹ ಸಮೀಕ್ಷೆ ನಡೆಸಲಾಗುವುದು, ಹಳೆಯ ಉಪಗ್ರಹ ಚಿತ್ರಗಳನ್ನು ಹೋಲಿಕೆ ಮಾಡಲಾಗುವುದು. ಪ್ರಸ್ತುತ ಪರಿಸ್ಥಿತಿಯನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.