ಚಿತ್ರದುರ್ಗ : ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದ್ದ ಜನತೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳು ಆಸರೆಯಾಗಿವೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಚಿತ್ರದುರ್ಗ ಜಿಲ್ಲೆಯ ಮಹಿಳೆಯರ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮೀ ಯೋಜನೆ ವರದಾನವಾಗಿದೆ. ಮಕ್ಕಳ ಶಾಲೆ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2000 ಸದ್ಬಳಕೆಯಾಗುತ್ತಿದೆ. ಇದರೊಂದಿಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಹೈನುಗಾರಿಕೆ, ಮನೆಗೆ ಪ್ರಿಡ್ಜ್ ಖರೀದಿಸಿ ಗೃಹಲಕ್ಷ್ಮೀ ಯೋಜನೆಯ ಸದುಯೋಗ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ಕಳೆದ 2023 ರ ಆಗಸ್ಟ್ 30 ರಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆಯ ಸದ್ವಿನಿಯೋಗದ ಪರಿಣಾಮಗಳು ಜಿಲ್ಲೆಯಲ್ಲಿ ಗೋಚರಿಸಲಾರಂಭಿಸಿದ್ದು, ಮಹಿಳೆಯರ ಪಾಲಿಗೆ ಈ ಯೋಜನೆ ನಿಜಕ್ಕೂ ವರದಾನವಾಗಿದೆ.
ರೂ.963 ಕೋಟಿ ಜಮೆ:
ಚಿತ್ರದುರ್ಗ ಜಿಲ್ಲೆಯಲ್ಲಿ 4,05,282 ಪಡಿತರ ಚೀಟಿಗಳು ಇದ್ದು, ಇದರಲ್ಲಿ 3,91,639 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿಯಾಗಿರುತ್ತಾರೆ. ಜಿಲ್ಲೆಯ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಸೆಪ್ಟಂಬರ್ ಅಂತ್ಯದ ವರೆಗೂ 963.58 ಕೋಟಿ ರೂ. ಜಮೆ ಮಾಡಲಾಗಿದೆ. ಇ-ಕೆವೈಸಿ ಹಾಗೂ ಎನ್.ಪಿ.ಸಿ.ಐ ಮ್ಯಾಪಿಂಗ್, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಿ, ಅರ್ಹ ಮಹಿಳೆಯರಿಗೆ ಸಹ ಗೃಹಲಕ್ಷ್ಮೀ ಹಣ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ.
ಹೊಲಿಗೆ ಯಂತ್ರ ಖರೀದಿ :
ಜಿಲ್ಲೆಯ ಕಲ್ಕೆರೆ ಗ್ರಾಮದ ದ್ರಾಕ್ಷಾಯಿಣಿ ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷಿ ಯೋಜನೆಯ 2000 ಸಾವಿರ ರೂ.ಗಳನ್ನು ಕೂಡಿಸಿಟ್ಟುಕೊಂಡು, ಸ್ವಂತಕ್ಕೆ ಹೊಲಿಗೆ ಯಂತ್ರ ಖರೀದಿಸಿದ್ದು, ಮನೆಯ ಬದುಕಿಗೆ ದಾರಿದೀಪವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಅದೇ ರೀತಿ ಬೇಡರ ಶಿವನಕೆರೆ ಗ್ರಾಮ ಸುನಿತಾ, ಗೃಹಲಕ್ಷ್ಮೀ ಯೋಜನೆ ಫಲಾನುಭವಿಯಾಗಿದ್ದಾರೆ. 14 ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ರೂ.2000 ಹಣ ಅವರ ಖಾತೆಗೆ ಜಮೆಯಾಗುತ್ತಿದೆ. ಮಕ್ಕಳ ಶಾಲೆ ಶುಲ್ಕ ಜೊತೆಗೆ ಟೈಲರ್ ವೃತ್ತಿಯನ್ನು ಆರಂಭಿಸಿ ದುಡಿಮೆಯ ಮಾರ್ಗ ಕಂಡಕೊಳ್ಳಲು ಯೋಚಿಸಿದ ಸುನಿತಾ ಗೃಹಲಕ್ಷ್ಮೀ ಹಣದಲ್ಲಿ ಹೊಸ ಹೊಲಿಗೆ ಯಂತ್ರ ಖರೀದಿ ಮಾಡಿದ್ದಾರೆ.
ಬಟ್ಟೆ ವ್ಯಾಪಾರಕ್ಕೆ ನೆರವಾದ ಗೃಹಲಕ್ಷ್ಮೀ:
ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಅಶ್ವಿನಿ ಗೃಹಲಕ್ಷ್ಮೀ ಹಣದಿಂದ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ. ವ್ಯಾಪಾರವು ಸಹ ಚೆನ್ನಾಗಿ ನಡೆಯುತ್ತಿದ್ದು, ಸ್ವಾವಲಂಬಿ ಬದುಕಿನಡೆಗೆ ಹೆಜ್ಜೆ ಇರಿಸಿದ್ದಾರೆ.
ಹೈನುಗಾರಿಕೆಗೆ ಇಂಬು:
ಸರ್ಕಾರ ಹೈನುಗಾರಿಕೆ ಆರಂಭಿಸಲು ಬ್ಯಾಂಕುಗಳ ಮೂಲಕ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಅದರೆ ಕೆಲವೊಮ್ಮೆ ಅಗತ್ಯ ದಾಖಲೆಗಳ ಕೊರತೆಯಿಂದ ಈ ಸಾಲ ಸೌಲಭ್ಯ ಪಡೆಯುವಲ್ಲಿ ಸಾಕಷ್ಟು ಜನರು ವಂಚಿತರಾಗುತ್ತಾರೆ. ಅದರೆ ಚಿತ್ರದುರ್ಗ ತಾಲ್ಲೂಕಿನ ಮೆದಹಳ್ಳಿ ಗ್ರಾಮದ ವಸಂತ ಅವರಿಗೆ ಗೃಹಲಕ್ಷ್ಮೀ ಯೋಜನೆ ಹಣ ಹೈನುಗಾರಿಕೆ ಆರಂಭಿಸಲು ಇಂಬು ನೀಡಿದೆ. ಯೋಜನೆ ಹಣ ಕೂಡಿಟ್ಟು ಹಸು ಖರೀದಿಸಿರುವ ವಸಂತ ಹೈನುಗಾರಿಕೆ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಫ್ರಿಡ್ಜ್ ಖರೀದಿಸಿ ಸಂತಸ ಪಟ್ಟ ಮಹಿಳೆ:
ಗೃಹಲಕ್ಷ್ಮೀ ಯೋಜನೆ ಚಳ್ಳಕೆರೆಯ ಶಾಂತಿನಗರ ನಿವಾಸಿ ಶಾಂತಿಯವರ ಸಂತಸ ಇಮ್ಮಡಿಗೊಳಿಸಿದೆ. ಬಹುದಿನಗಳಿಂದ ಮನೆಗೊಂದು ಫ್ರಿಡ್ಸ್ ಖರೀದಿಸಲು ತವಕ ಪಡುತ್ತಿದ್ದ ಶಾಂತಿಯವರು ಗೃಹಲಕ್ಷ್ಮೀ ಹಣದಲ್ಲಿ ಮನಗೆ ಹೊಸ ಫ್ರಿಡ್ಜ್ ಖರೀದಿಸಿದ್ದಾರೆ.
ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿಯೇ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾದ ಯೋಜನೆಯಾಗಿದ್ದು, ಯೋಜನೆಯನ್ನು ಎಲ್ಲ ಅರ್ಹ ಮಹಿಳೆಯರಿಗೆ ತಲುಪಿಸುವಲ್ಲಿ ಸರ್ಕಾರವೇ ನೇಮಿಸಿರುವ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಿವಣ್ಣ ಹಾಗೂ ಉಪಾಧ್ಯಕ್ಷರಾದ ಡಿ.ಎನ್. ಮೈಲಾರಪ್ಪ ಅವರು, ನಿರಂತರ ಶ್ರಮ ವಹಿಸುತ್ತಿದ್ದು, ಜಿಲ್ಲೆಯ ಜೊತೆಗೆ ಪ್ರತಿ ತಾಲ್ಲೂಕು ಮಟ್ಟದಲ್ಲಿಯೂ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ.
ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಲಾಭ ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವುದರೊಂದಿಗೆ, ಎಲ್ಲ ಮಹಿಳೆಯರಿಗೂ ಭರವಸೆ ಹಾಗೂ ಆತ್ಮವಿಶ್ವಾಸ ಮೂಡಿಸಿದೆ ಜೊತೆಗೆ ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಯೋಜನೆ ವರವಾಗಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಅವರು.
ಗೃಹಲಕ್ಷ್ಮಿ ಯೋಜನೆ ಪ್ರತಿಯೊಂದು ಅರ್ಹ ಮಹಿಳೆಯರಿಗೆ ತಲುಪಿಸಬೇಕೆನ್ನುವುದು ಜಿಲ್ಲಾಡಳಿತದ ಆಶಯವಾಗಿದ್ದು, ಅನುಷ್ಠಾನದಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ, ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಬೇಕು, ಮಹಿಳೆಯರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎನ್ನುತ್ತಾರೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು.
ಜಿಲ್ಲೆಯಲ್ಲಿ ಬಾಕಿ ಉಳಿದ ಪಡಿತರ ಕಾರ್ಡು ಹೊಂದಿರುವವರ ಪೈಕಿ ಅರ್ಹರನ್ನು ಗುರುತಿಸಿ ಯೋಜನೆಯಡಿ ನೊಂದಣಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆಯಡಿ ನೊಂದಣಿಯಾಗದವರ ವಿವರಗಳನ್ನು ತಾಲ್ಲೂಕು ಹಾಗೂ ಗ್ರಾಮವಾರು ಸಿದ್ದಪಡಿಸಲಾಗಿದೆ. ಈ ಮಾಹಿತಿಯನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೂಲಕ ಹಾಗೂ ತಾಲ್ಲೂಕು ಪಂಚಾಯಿತಿ ಇಓ ಹಾಗೂ ಸಿಡಿಪಿಓಗಳ ಸಮಿತಿ ರಚಿಸಿ ಸಂಪೂರ್ಣವಾಗಿ ಶೇ.100 ರಷ್ಟು ಯೋಜನೆಯನ್ನು ಜಿಲ್ಲೆಯ ಮಹಿಳೆಯರಿಗೆ ತಲುಪಿಸುವುದಾಗಿ ಜಿ.ಪಂ. ಸಿಇಓ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.