ಬೆಂಗಳೂರು: ಕೊಪ್ಪಳ ಜಿಲ್ಲೆಯ ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ, ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮದೇವಿ ಎಂದು ನಾಮಕರಣ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ, ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮದೇವಿ, ಬಾನಾಪುರ ರೈಲು ನಿಲ್ದಾಣಕ್ಕೆ ಮಹಾತ್ಮ ಗಾಂಧಿ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಿಫಾರಸು ಕಳುಹಿಸಲಾಗಿದ್ದು, ಅವರ ಮೂಲಕ ಇದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಗಂಗಾವತಿ, ಮುನಿರಾಬಾದ್, ಬಾನಾಪುರ ರೈಲು ನಿಲ್ದಾಣಗಳಿಗೆ ಮರು ನಾಮಕರಣ ಮಾಡುವುದರ ಮೂಲಕ ಜನರ ಭಾವನೆಗಳಿಗೆ ಮನ್ನಣೆ ನೀಡಿದಂತಾಗುತ್ತದೆ. ಅಂಜನಾದ್ರಿಯು ರಾಮಾಯಣದಲ್ಲಿ ಬರುವ ಆಂಜನೇಯನ ಜನ್ಮಸ್ಥಳವಾಗಿದೆ. ಹುಲಿಗೆಮ್ಮದೇವಿ ಈ ಭಾಗದ ಜನಪ್ರಿಯ ಜನಪದ ದೇವತೆಯಾಗಿದೆ. ಮಹಾತ್ಮ ಗಾಂಧಿ ಅವರ ಹೆಸರಿಡುವುದರ ಹಿಂದೆ ಕೂಡ ಐತಿಹಾಸಿಕ ಕಾರಣವಿದೆ ಎಂದು ತಿಳಿಸಿದ್ದಾರೆ.