ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವುದಾಗಿ ಘೋಷಿಸಿದ್ದರು. ಅದರಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಶಾಲಾ ಮುಖ್ಯೋಪಾಧ್ಯಾಯರಿಗೆ ಮಹತ್ವದ ಸೂಚನೆಯನ್ನು ನೀಡಿದೆ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲು, ಉಲ್ಲೇಖ(1 ಮತ್ತು 3)ರಲ್ಲಿ ಆದೇಶ ಹೊರಡಿಸಲಾಗಿರುತ್ತದೆ. ಯೋಜನೆಯ ಅನುಷ್ಠಾನವು ಈಗಾಗಲೇ ಪ್ರಾರಂಭವಾಗಿದೆ. ಸದರಿ ಯೋಜನೆಯನ್ನು ಇನ್ನೂ ನಿಖರವಾಗಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ(EDCS) ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ತಂತ್ರಾಂಶವನ್ನು ಬಳಸಿಕೊಂಡು ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರವನ್ನು ಆನ್-ಲೈನ್‌ನಲ್ಲಿ ದಾಖಲಿಸಬೇಕಾಗಿದೆ ಎಂದಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಶಾಲಾ ಶಿಕ್ಷಣ ಇಲಾಖೆಗೆ ಒಳಪಡುವ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ಶಾಲಾ ಶಿಕ್ಷಣ ಇಲಾಖೆಯ ಜಾಲತಾಣವಾದ schooleducation.karnataka.gov.in ನಲ್ಲಿ “ ಉಚಿತ ವಿದ್ಯುತ್ ಸಂಪರ್ಕಕ್ಕೆ ಮಾಹಿತಿ ನಮೂದಿಸಲು ಇಲ್ಲಿ ಕ್ಲಿಕ್ ಮಾಡಿ ” ಎಂಬ ಸ್ಮಾಲ್ ಲಿಂಕ್‌ನ್ನು ಪ್ರಕಟಿಸಲಾಗಿದ್ದು, ಸದರಿ ಲಿಂಕ್‌ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಸೇವಾ ಸಿಂಧು ಪೋರ್ಟ್ ನ ವೆಬ್‌ಪೇಜ್ ತೆರೆದುಕೊಳ್ಳುತ್ತದೆ. ಈ ವೆಬ್‌ಪೇಜ್‌ನ ಮುಖಪುಟದಲ್ಲಿ ಈ ಕೆಳಕಂಡ ಕ್ರಮಗಳನ್ನು ಶಾಲೆಯ ಮುಖ್ಯಸ್ಥರು ನಿರ್ವಹಿಸಬೇಕಾಗಿರುತ್ತದೆ ಎಂದು ಹೇಳಿದೆ.
1. ಸಂಬಂಧಪಟ್ಟ ಸರ್ಕಾರಿ ಶಾಲೆಯ ಯು-ಡೈಸ್ ಸಂಖ್ಯೆಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿದಾಗ ಶಾಲೆಯ ಹೆಸರು, ವಿಳಾಸ ಮತ್ತು ಶಾಲೆಯ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆ ಹಾಗೂ ಶಾಲೆಗೆ ಸಂಬಂಧಿಸಿದ ವಿವರಗಳು ಪ್ರದರ್ಶಿತಗೊಳ್ಳುತ್ತವೆ. ಈ ವಿವರಗಳು ತಮ್ಮ ಶಾಲೆಗೆ ಸಂಬಂಧಿಸಿದವು ಎಂದು
2. ಸದರಿ ಯು-ಡೈಸ್ ಗೆ ಲಿಂಕ್ ಮಾಡಲಾಗಿರುವ ಮೊಬೈಲ್ ಸಂಖ್ಯೆ/ಶಾಲಾ ಮುಖ್ಯೋಪಾಧ್ಯಾಯರ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ OTP (One Time Password)ಯನ್ನು ನಮೂದಿಸಿ, ದಾಖಲೆಗಳನ್ನು ಪರಿಶೀಲಿಸಿ Validate ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
3. ತಮ್ಮ ಶಾಲೆಯು ಒಳಪಡುವ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ESCOM) ವನ್ನು ಆಯ್ಕೆ ಮಾಡಿಕೊಂಡು ಶಾಲೆಯ ವಿದ್ಯುತ್ ಬಿಲ್‌ನಲ್ಲಿ ನಮೂದಿಸಿರುವ ಅಕೌಂಟ್ ನಂಬರ್‌ನ್ನು ನಿಖರವಾಗಿ ಪರಿಶೀಲಿಸಿಕೊಂಡು ನಿಗಧಿತ ಸ್ಥಳದಲ್ಲಿ ನಿಖರವಾಗಿ ನಮೂದಿಸಬೇಕು.
4. ಮಾಹಿತಿ ನಿಖರವಾಗಿರುವ ಬಗ್ಗೆ ದೃಢೀಕರಣ ವಾಕ್ಯದ ಬಟನ್ ಕ್ಲಿಕ್ ಮಾಡಬೇಕು.
5. ಅಂತಿಮವಾಗಿ Captcha ವನ್ನು ಯಥಾಪ್ರಕಾರ ನಮೂದಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
6. Acknowledgement ನ್ನು ಪಡೆದು, ಮುದ್ರಿಸಿ ಕಡತದಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಬೇಕು.
ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳು ತಮ್ಮ ಶಾಲೆಯ ವಿದ್ಯುತ್ ಸಂಪರ್ಕದ ವಿವರಗಳನ್ನು ದಿನಾಂಕ: 10/10/2024ರೊಳಗೆ ತಪ್ಪದೇ ಭರ್ತಿ ಮಾಡುವಂತೆ ಕ್ರಮವಹಿಸಲು ಸೂಚಿಸಿದೆ.