ನವದೆಹಲಿ : ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದಿರುವ ಎನ್ ಡಿಎ ಮೈತ್ರಿಕೂಟ ಈಗಾಗಲೇ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದು, ಈ ನಡುವೆ ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಜೂನ್ 8 ರಂದು ಪ್ರಧಾನಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್. 8 ರಂದು ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಪ್ರಧಾನಿ ಮೋದಿ ಪದಗ್ರಹಣದ ಸಮಾರಂಭದ ವೇಳೆಯೇ ಕೇಂದ್ರ ಸಚಿವರಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ದಾಖಲೆಯ ಮೂರನೇ ಅವಧಿಗೆ ಆಯ್ಕೆಯಾದ ಪ್ರಧಾನಿ ಮೋದಿ ಅವರಿಗೆ 95 ಕ್ಕೂ ಹೆಚ್ಚು ವಿಶ್ವ ನಾಯಕರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿಶ್ವದ ವಿವಿಧ ಮೂಲೆಗಳಿಂದ ಬೆಂಬಲದ ಮಹಾಪೂರವೇ ಹರಿದು ಬರುತ್ತಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ನಾಯಕತ್ವದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಭಾರತದ ಹತ್ತಿರದ ನೆರೆಹೊರೆ ಮತ್ತು ಅದರ ವಿಸ್ತೃತ ಪರಿಧಿಯಿಂದ, ಗಮನಾರ್ಹ ನಾಯಕರು ತಮ್ಮ ಅಭಿನಂದನಾ ಶುಭಾಶಯಗಳನ್ನು ಕಳುಹಿಸಿದ್ದಾರೆ. ಶ್ರೀಲಂಕಾ, ಮಾಲ್ಡೀವ್ಸ್, ಇರಾನ್ ಮತ್ತು ಸೀಶೆಲ್ಸ್ ಅಧ್ಯಕ್ಷರು, ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಮತ್ತು ಮಾರಿಷಸ್ ಪ್ರಧಾನಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಶುಭ ಕೋರಿದ್ದಾರೆ.