ಬೆಂಗಳೂರು: ದಂಪತಿಗಳು ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಪತ್ನಿಯ ಒಪ್ಪಿಗೆಯಿಲ್ಲದೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸುವುದು ಕಾನೂನುಬಾಹಿರ. ಇಂತಹ ಪ್ರಕರಣವೊಂದರಲ್ಲಿ ಪತಿಯ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ:
ತಮಿಳುನಾಡಿನ ಮಧುರೈ ನಿವಾಸಿ ಆರ್. ನಿಶಾಂತ್ ಎಂಬುವವರು ತಮ್ಮ ವಿರುದ್ಧ ಪತ್ನಿ ದಾಖಲಿಸಿದ್ದ ಅತ್ಯಾಚಾರ, ಜೀವ ಬೆದರಿಕೆ ಮತ್ತು ಅತಿಕ್ರಮ ಪ್ರವೇಶದ ಕೇಸನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. 2021ರ ಕೊನೆಯಲ್ಲಿ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, “ಪತಿ-ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ, ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಸಂಭೋಗ ನಡೆಸಿದರೆ ಅದು ಐಪಿಎಸ್ ಸೆಕ್ಷನ್ 376(ಬಿ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ” ಎಂದು ಸ್ಪಷ್ಟಪಡಿಸಿತು.
ಸಂಭೋಗ ನಡೆದಿಲ್ಲ, ವೈದ್ಯಕೀಯ ವರದಿಗಳಲ್ಲಿ ವ್ಯತಿರಿಕ್ತ ಅಂಶಗಳಿವೆ ಮತ್ತು ಸಂಧಾನಕ್ಕಾಗಿ ಪತ್ನಿಯೇ ಮನೆಗೆ ಕರೆಸಿಕೊಂಡಿದ್ದರು” ಎಂದು ಪತಿಯ ಪರ ವಕೀಲರು ವಾದಿಸಿದರು.”ಘಟನೆ ನಡೆದ ದಿನ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದಕ್ಕೆ ದಾಖಲೆಗಳಿವೆ. ಸಿಡಿಆರ್ (CDR) ವರದಿಯ ಪ್ರಕಾರ ಪತಿ ಸ್ಥಳದಲ್ಲಿದ್ದದ್ದು ದೃಢಪಟ್ಟಿದೆ” ಎಂದು ಪತ್ನಿ ಸ್ವತಃ ವಾದ ಮಂಡಿಸಿದರು.
ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿದ್ದ ಮೇಲೆ ಪತಿ ಆಕೆಯ ಮನೆಗೆ ಹೋಗಿದ್ದೇಕೆ? ಇಬ್ಬರೂ ವರ್ಷಗಳಿಂದ ದೂರವಿದ್ದಾಗ ಈ ಘಟನೆ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಧಾರಗಳಿವೆ. ಇಂತಹ ಸೂಕ್ಷ್ಮ ವಿಚಾರಗಳನ್ನು ವಿಚಾರಣಾ ನ್ಯಾಯಾಲಯವೇ ನಿರ್ಧರಿಸಬೇಕು, ನಾವು ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿದೆ.
ಕಾನೂನು ಕ್ರಮ ಏನು?
ಈ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಆರೋಪಗಳಿಂದ ಮುಕ್ತಿ ಪಡೆಯಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪತಿಗೆ ಸ್ವಾತಂತ್ರ್ಯ ನೀಡಿದೆ.








