ಬೆಂಗಳೂರು : ಇದೇ ಮೊದಲ ಬಾರಿಗೆ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮಾರ್ಚ್ 21ರಂದು ‘ಕಾವೇರಿ ಆರತಿ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕನ್ನಡಿಗರ ಜೀವ ನದಿಯಾಗಿರುವ ಕಾವೇರಿ ಮಾತೆಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಬನ್ನಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜಧಾನಿ ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಾರದೆಂದು ಸ್ಯಾಂಕಿ ಕೆರೆಯಲ್ಲಿ ‘ಕಾವೇರಿ ಆರತಿ’ ಕಾರ್ಯಕ್ರಮವನ್ನು ವಿಶೇಷ ಶುಕ್ರವಾರ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರವು ಈ ಬಾರಿ ವಿಶ್ವಜಲ ದಿನಾಚರಣೆ ಅಂಗವಾಗಿ ಒಂದು ವಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಜನರಲ್ಲಿನೀರು ಉಳಿಸಿ, ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಸ್ಯಾಂಕಿ ಕೆರೆಯಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 5.30ಕ್ಕೆ ಅನನ್ಯ ಭಟ್, ರಘು ದೀಕ್ಷಿತ್ ಅವರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಬೆಂಗಳೂರಲ್ಲಿ ಮೊದಲ ಬಾರಿಗೆ ಮುಂಬೈನಿಂದ ವಿಶೇಷವಾಗಿ ತರಿಸಲಾದ ತೇಲುವ ವೇದಿಕೆ ಸಿದ್ದಪಡಿಸಲಾಗಿದೆ. 2 ತಂಡ ಸುಮಾರು 50 ನಿಮಿಷಗಳ ಕಾಲ ಕಾವೇರಿ ಆರತಿ ನಡೆಸಲಿವೆ. ಕಾರ್ಯಕ್ರಮ ವೀಕ್ಷಣೆಗೆ ಜನರಿಗೆ ಮುಕ್ತ ಅವಕಾಶವಿದೆ. ಯಾವುದೇ ರೀತಿಯ ಪಾಸ್, ಶುಲ್ಕ ಇರುವುದಿಲ್ಲ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ. ಸಾರ್ವಜನಿಕರು ಭಾಗವಹಿಸಿ ನಂತರ ಅಭಿಪ್ರಾಯ ತಿಳಿಸುವಂತೆ ತಿಳಿಸಿದರು.