ಕೊಪ್ಪಳ: ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಂದ ರೈತರು ಕಂಗಾಲಾಗಿದ್ದು, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಗೊಬ್ಬರ ಸಿಗದಕ್ಕೆ ರೈತರೊಬ್ಬರು ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ತಾಲೂಕು ಕುಣಿಕೇರಿ ತಾಂಡಾದ ರೈತ ಚಂದ್ರಪ್ಪ ಬಡಿಗಿ ಶನಿವಾರ ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ. ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ರೈತ ಚಂದ್ರಪ್ಪ, ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕಾದು ಕುಳಿತರೂ ಯೂರಿಯಾ ರಸಗೊಬ್ಬರ ಸಿಕ್ಕಿಲ್ಲ. ಇದರಿಂದ ರೈತ ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳೆ ಬೆಳೆಯಲು ಗೊಬ್ಬರ ಸಿಗುತ್ತಿಲ್ಲ, ನಾವೇನು ಹೊಟ್ಟೆಗೆ ಮಣ್ಣು ತಿನ್ನೋದಾ ಎಂದು ಕಿಡಿಕಾರಿದ್ದಾರೆ. ಗೊಬ್ಬರ ಕೊಳ್ಳಲು ಅಂಗಡಿಗೆ ಬಂದರೆ ನೋ ಸ್ಟಾಕ್ ಎಂದು ಬೋರ್ಡ್ ಹಾಕಿದ್ದಾರೆ, ನಾವೇನು ಮಾಡೋದು..ಹೊಲಕ್ಕೆ ಏನು ಹಾಕೋದು ಎಂದು ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಸದ್ಯ ಚೆನ್ನಾಗಿ ಮಳೆಯಾಗಿದೆ. ಗೊಬ್ಬರವಿಲ್ಲವೆಂದರೆ ಹೇಗೆ? ಬೆಳಗಿನ ಜಾವ ನಾಲ್ಕು ಗಂಟೆಗೆ ಬಂದು ಕಾದರೂ ಗೊಬ್ಬರ ಸಿಕ್ಕಿಲ್ಲ. ಮೆಕ್ಕಜೋಳ, ಹಾಳಾಗುತ್ತಿವೆ. ತೊಗರಿ ಬೆಳೆ ಮಹತ್ವದ ಸಮಯದಲ್ಲಿಯೂ ಯೂರಿಯಾ ಸಿಗದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ಸಿಗದೇ ಇರುವುದರಿಂದ ಕೃಷಿ ಕೆಲಸ ಬಿಟ್ಟು ಅಂಗಡಿಗಳಿಗೆ ಗೊಬ್ಬರ ಹುಡುಕಿಕೊಂಡು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಗದಗ, ಹಾವೇರಿ, ಕೊಪ್ಪಳ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ತೀವ್ರ ಅಭಾವ ಸೃಷ್ಟಿಯಾಗಿದೆ.