ಬೆಂಗಳೂರು : ಅಪಘಾತ ಕೇಸ್ ಗಳಲ್ಲಿ ಸರ್ಕಾರ ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡಿದೆ ಎಂಬ ಕಾರಣಕ್ಕೆ ವಿಮಾ ಕಂಪನಿಗಳು ಪರಿಹಾರ ಮೊತ್ತದಲ್ಲಿ ಕಡಿತ ಮಾಡುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
2013ರ ಏ.9ರಂದು ದಕ್ಷಿಣ ಕನ್ನಡದ ಉಪ್ಪಿನಂಗಡಿಯ ಪೆರ್ನೆ ಬಳಿ ಸಂಭವಿಸಿದ್ದ ಎಲ್ ಪಿಜಿ ಟ್ಯಾಂಕರ್ ಸ್ಪೋಟದಲ್ಲಿ ಮೃತಪಟ್ಟಿದ್ದ 13 ಮಂದಿಯ ಕುಟುಂಬಗಳಿಗೆ ಸರ್ಕಾರ ಹೆಚ್ಚುವರಿ ಪರಿಹಾರ ನೀಡಿದ್ದು, ಆ ಮೊತ್ತವನ್ನು ಅಪಘಾತ ವಿಮೆಯಲ್ಲಿ ಕಡಿತಗೊಳಿಸಬೇಕು ಎಂದು ಕೋರಿ ದಿ ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಶ್ರೀಸುಧಾ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದ್ದು,ಸರ್ಕಾರ ನೀಡಿರುವ ಪರಿಹಾರ ಸಂತ್ರಸ್ತ ಕುಟುಂಬಗಳಿಗೆ ಸಾಮಾಜಿಕ ಭದ್ರತೆಯಾಗಿದೆ. ಅದಕ್ಕೂ ವಿಮೆ ಪರಿಹಾರಕ್ಕೂ ಸಂಬಂಧ ಇಲ್ಲ ಎಂದು ತೀರ್ಪು ನೀಡಿದೆ.
ಅಪಘಾತದ ಪ್ರಕರಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಉಂಟಾಗಿದೆ ಎಂದಿರುವ ಕೋರ್ಟ್, ಮೋಟಾರು ವಾಹನ ಕಾಯ್ದೆ ಅಡಿ ಪರಿಹಾರ ನೀಡಲು ಆದೇಶಿಸಿದ್ದ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ಪಾಲಿಸುವಂತೆ ವಿಮಾ ಕಂಪನಿಗೆ ಸೂಚನೆ ನೀಡಿದೆ.








