ಬೆಂಗಳೂರು : ಗ್ರಾಮ ಪಂಚಾಯತ್ ನೌಕರರಿಗೆ ಇ.ಎಸ್.ಐ ಸೌಲಭ್ಯ ನೀಡಲು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಕಾರ್ಮಿಕ ಸಚಿವರಾದ ಡಾ. ಮನ್ಸುಕ್ ಮಾಂಡವೀಯ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದ 5,995 ಗ್ರಾಮ ಪಂಚಾಯತ್ ಗಳೂ ಸೇರಿದಂತೆ, ಭಾರತ ದೇಶದಲ್ಲಿ 2,55,401 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 16,77,005 ಮಂದಿ ಪಂಚಾಯತ್ ಸಿಬ್ಬಂದಿಗಳು ದುಡಿಯುತ್ತಿದ್ದು, ಸದರಿ ಸಿಬ್ಬಂದಿಗಳಿಗೆ ಇ.ಎಸ್.ಐ ( ಆರೋಗ್ಯ ವಿಮೆ) ಸೌಲಭ್ಯ ಸಿಗುತ್ತಿಲ್ಲ ಎಂಬ ಕೊರಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಬಡವರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ನೀರುಗಂಟಿ, ಜಾಡಮಾಲಿ, ವಾಟರ್ ಮೆನ್, ಕಂಪ್ಯೂಟರ್ ಆಪರೇಟರ್, ಜವಾನ ಸೇರಿದಂತೆ, 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿರುವುದರಿಂದ ಈಗಿರುವ ನಿಯಮದಂತೆ, ಸದ್ರಿ ಸಿಬ್ಬಂದಿಗಳು ಆರೋಗ್ಯ ವಿಮೆಯಿಂದ ವಂಚಿತರಾಗಿದ್ದು; ಸಂಕಷ್ಟ ಪಡುತ್ತಿದ್ದಾರೆ.
ಆದ್ದರಿಂದ ಮಾನವೀಯ ನೆಲೆಯಲ್ಲಿ ಕೇಂದ್ರ ಸರಕಾರ, ಎಲ್ಲಾ ರಾಜ್ಯಗಳಿಂದ ಮಾಹಿತಿಯೊಂದಿಗೆ ವರದಿ ಪಡೆದು, ಪಂಚಾಯತ್ ಸಿಬ್ಬಂದಿಗಳಿಗೂ ಇಎಸ್ಐ ಸೌಲಭ್ಯ ನೀಡಿ, ಬಡ ಸಿಬ್ಬಂದಿಗಳ ಕುಟುಂಬಕ್ಕೆ ನೆರವಾಗಬೇಕೆಂದು ಕೇಂದ್ರ ಕಾರ್ಮಿಕ ಸಚಿವರಾದ ಡಾ. ಮನ್ಸುಕ್ ಮಾಂಡವೀಯ ರವರನ್ನು ಭೇಟಿ ಮಾಡಿ ಲಿಖಿತ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವರು, ಇಲ್ಲಿಯವರೆಗೆ ನನ್ನ ಗಮನ ಬಂದಿರಲಿಲ್ಲ. ಈ ಬಗ್ಗೆ ಅಗತ್ಯ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೊತೆಯಲ್ಲಿ ಬಾಗಲಕೋಟೆ ಲೋಕಸಭಾ ಸದಸ್ಯ ಶ್ರೀ ಪಿ.ಸಿ ಗದ್ದಿಗೌಡರ್ ಉಪಸ್ಥಿತರಿದ್ದರು.