ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೌಕರಿ ಕೋರಿ ಸಲ್ಲಿಸುತ್ತಿರುವ ಪ್ರಸ್ತಾವನೆಗಳನ್ನು ಕ್ರಮವಾಗಿ ಪರಿಶೀಲಿಸದೇ, ಅಪೂರ್ಣ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಅನುಕಂಪದ ಆದಾರದ ಮೇರೆಗೆ ನೇಮಕಾತಿ ನೀಡುವ ಬಗ್ಗೆ ಉಲ್ಲೇಖ [2] ಮತ್ತು [4] ರ ಸರ್ಕಾರದ ಅಧಿಸೂಚನೆಗಳಲ್ಲಿ ಹಾಗೂ ಕಾಲಕಾಲಕ್ಕೆ ಹೊರಡಿಸಿರುವ ಸರ್ಕಾರದ ಆದೇಶಗಳ ಪ್ರಕಾರ ಮತ್ತು ಈ ಕಛೇರಿಯಿಂದ ಉಲ್ಲೇಖ [1] [3] ಮತ್ತು [5] ರಲ್ಲಿ ನೀಡಿರುವ ಸುತ್ತೋಲೆಗಳು ಮತ್ತು ವಿಡಿಯೋ ಸಂವಾದದಲ್ಲಿ ನೀಡಿರುವ ನಿರ್ದೇಶನದಂತೆ, ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಗಳೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರುಗಳು ಮತ್ತು ವಿಭಾಗೀಯ ಸಹ ನಿರ್ದೇಶಕರುಗಳು ಮತ್ತು ಸಂಬಂದಿಸಿದ ಅಧಿಕಾರಿಗಳು ಅನುಕಂಪದ ಆಧಾರದ ನೇಮಕಾತಿ ಪ್ರಸ್ತಾವನೆಗಳನ್ನು ಯಾವುದೇ ವಿಳಂಬವಿಲ್ಲದಂತೆ ಸೂಕ್ತ ಆಯಾ ನೇಮಕಾತಿ ಪ್ರಾಧಿಕಾರಿಯವರಿಗೆ ಕಳುಹಿಸಲು ಸೂಚಿಸಲಾಗಿರುತ್ತದೆ.
ಅನುಕಂಪದ ಆಧಾರಿತ ನೇಮಕಾತಿ ಪ್ರಸ್ತಾವನೆಗಳ ಬಗ್ಗೆ ಅಧೀನ ಕಛೇರಿಗಳಲ್ಲಿ ಯಾವುದೇ ವಿಳಂಬಕ್ಕೆ ಆಸ್ಪದವಾಗದಂತೆ ಆಯಾ ಕಛೇರಿ ಮುಖ್ಯಸ್ಥರು/ಬಿಇಒ/ಸಹನಿರ್ದೇಶಕರು/ಉಪ ನಿರ್ದೇಶಕರು ಕ್ರಮವಹಿಸಲು ಮತ್ತು ಸ್ವಯಂ ಎಚ್ಚರಿಕೆ ವಹಿಸಲು ಅನುವಾಗುವಂತೆ ಕೆಳಗಿನಂತೆ ಸೂಚನಾಂಶಗಳನ್ನು ಪಾಲಿಸಲು ಸಹ ತಿಳಿಸಲಾಗಿತ್ತು.
01. ಇಲಾಖೆಯ ಮೃತ ಸಿಬ್ಬಂದಿಗಳು ಸಹೋದ್ಯೋಗಿ ಮಿತ್ರರೇ ಆಗಿದ್ದು ಸಂಕಷ್ಟದಲ್ಲಿರುವ ಇಲಾಖಾ ಸಿಬ್ಬಂದಿಗಳು ಆ ಕುಟುಂಬಕ್ಕೆ ನೈತಿಕ ಸ್ಥೆರ್ಯವನ್ನು ತುಂಬುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸುವುದು ಎಲ್ಲಾ ಸಂಬಂಧಿತ ಅಧಿಕಾರಿ/ನೌಕರರ ಜವಾಬ್ದಾರಿಯಾಗಿರುತ್ತದೆ. ಇದಕ್ಕಾಗಿ ಆಯಾ ಕಛೇರಿ/ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿನ ಅಂತಹ ಮೃತರ ಕುಟುಂಬ ಸದಸ್ಯರಿಗೆ ಸಕಾಲದಲ್ಲಿ ಅನುಕಂಪದ ಆಧಾರಿತ ನೇಮಕಾತಿ ಬಗ್ಗೆ ಅರ್ಜಿಯನ್ನು ಕ್ರಮವಾಗಿ ಸಲ್ಲಿಸುವ ಬಗ್ಗೆ ಆಯಾ ಕಛೇರಿಯ ಮುಖ್ಯಸ್ಥರು ವಿಳಂಬವಿಲ್ಲದಂತೆ ಅಗತ್ಯ ತಿಳುವಳಿಕೆಯನ್ನು ನೀಡಲು ಕ್ರಮವಹಿಸುವುದು.
02. ಅನುಕಂಪದ ಆಧಾರಿತ ನೇಮಕಾತಿಗೆ ಇರುವ ನಿಯಮಗಳು ಮತ್ತು ಅಗತ್ಯವಿರುವ ದಾಖಲೆಗಳು ಹಾಗೂ ಚೆಕ್ಲಿಸ್ಟ್/ನಮೂನೆಗಳನ್ನು ನೀಡಿ ಅನುಕಂಪದ ಆಧಾರಿತ ನೇಮಕಾತಿ ಕೋರುವ ಅರ್ಜಿದಾರರಿಗೆ ಸಕಾಲದಲ್ಲಿ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ಅನುವಾಗುವಂತೆ ಕ್ರಮವಹಿಸುವುದು.
03. ಅರ್ಜಿದಾರರಿಂದ ಸ್ವೀಕೃತವಾಗುವ ಸದರಿ ಪ್ರಸ್ತಾವನೆಗಳನ್ನು ವಿಳಂಬವಿಲ್ಲದಂತೆ ಕಛೇರಿಯ ಕಾರ್ಯವಿಧಾನದಂತೆ, ಕನಿಷ್ಠ ಕಾಲಾವಧಿಯೊಳಗೆ ಮೇಲು ಕಛೇರಿಗೆ ಸಲ್ಲಿಸಲು ಆಯಾ ಕಛೇರಿ ಮುಖ್ಯಸ್ಥರು ಕ್ರಮ ವಹಿಸಲು ಮತ್ತು ಆಯಾ ಕಛೇರಿಗೆ ಸಲ್ಲಿಸಿದ ದಿನಾಂಕದವರೆಗೆ ವಿವಿಧ ನೌಕರರ/ಅಧಿಕಾರಿಗಳ ಹಂತದಲ್ಲಿ ತೆಗೆದುಕೊಂಡ ಕಾಲಾವಧಿ ಕುರಿತಂತೆ ದಿನಚರಿ/ಕಾಲಾನುಕ್ರಮಣಿಕೆಯನ್ನು ದೃಢೀಕರಿಸಿ ಲಗತ್ತಿಸಿ ಸಲ್ಲಿಸುವುದು. ಹಾಗೆಯೇ ಸಲ್ಲಿಸುವ ಪ್ರಸ್ತಾವನೆಗಳೊಂದಿಗೆ “ಪ್ರಸ್ತಾವನೆಯನ್ನು ಮೇಲ್ಕಛೇರಿಗೆ ಸಲ್ಲಿಸಲು ಕನಿಷ್ಠ, ಕಾಲಾವಧಿಯನ್ನು ತೆಗೆದುಕೊಳ್ಳಲಾಗಿದ್ದು, ಯಾವುದೇ ಅನಗತ್ಯ ವಿಳಂಬ ಸಂಭವಿಸಿಲ್ಲ” ಎಂಬುದಾಗಿ ಆಯಾ ಕಛೇರಿ ಮುಖ್ಯಸ್ಥರು ಪ್ರತ್ಯೇಕವಾದ ಒಂದು ದೃಢೀಕರಣವನ್ನು ಸಹ ಲಗತ್ತಿಸಿ ಸಲ್ಲಿಸುವುದು.
ಸದರಿ ಪ್ರಸ್ತಾವನೆಗಳೊಂದಿಗೆ ಸದರಿ ಕಡತ ನಿರ್ವಹಣೆಗೆ ಆಯಾ ಕಛೇರಿಯಲ್ಲಿ ತೆಗೆದುಕೊಂಡಿರುವ ಕಾಲಾವಧಿ ಬಗ್ಗೆ ವಿವರವಾದ ಕಾಲಾನುಕ್ರಮಣಿಕೆ ಅಂದರೆ, ಆಯಾ ಕಾರ್ಯ ನಿರ್ವಾಹಕರು/ಅಧೀಕ್ಷಕರು/ವ್ಯವಸ್ಥಾಪಕರು/ಪತ್ರಾಂಕಿತ ಸಹಾಯಕರ ಹಂತಗಳಲ್ಲಿ ತೆಗೆದುಕೊಂಡಿರುವ ಕಾಲಾವಧಿ ದಿನಚರಿಯನ್ನು ನಮೂದಿಸಿ ದೃಡೀಕರಿಸಿ ಉಪ ನಿರ್ದೇಶಕರು/ಕಛೇರಿ ಮುಖ್ಯಸ್ಥರು ಮೇಲು ಕಛೇರಿಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿರುವುದರಿಂದ ವಿಳಂಬವಾಗುವುದರ ತಡೆಗೆ ಒಂದು ಸ್ವಯಂ ಎಚ್ಚರಿಕೆ ಪರಿಣಾಮವನ್ನು ತರಬಹುದಾಗಿದೆ. ಇದರಿಂದ ಪ್ರಸ್ತಾವನೆ ನಿರ್ವಹಣೆಯಲ್ಲಿ ಅನಗತ್ಯ ವಿಳಂಬವನ್ನು ತಪ್ಪಿಸಬಹುದಾಗಿರುತ್ತದೆ.
ಹೀಗಾಗಿ, ಇನ್ನು ಮುಂದೆ ಎಲ್ಲಾ ಅನುಕಂಪದ ಆಧಾರಿತ ಪ್ರಸ್ತಾವನೆಗಳನ್ನು ಮೇಲು ಕಛೇರಿಗೆ ಸಲ್ಲಿಸುವಾಗ ಈ ಹಿಂದೆ ನಿಗಧಿಪಡಿಸಿರುವ ಚೆಕ್ ಲೀಸ್ಟ್ ನೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಜೊತೆಗೆ ಮೇಲಿನಂತೆ ಸಂಪೂರ್ಣ ಕಾಲಾನುಕ್ರಮಣಿಕೆ ಮತ್ತು ದೃಢೀಕರಣವನ್ನು ಸಹ ಆಯಾ ಉಪ ನಿರ್ದೇಶಕರು/ಸಹ ನಿರ್ದೇಶಕರು ಕಡ್ಡಾಯವಾಗಿ ಲಗತ್ತಿಸುವುದು. ಅಧೀನ ಕಛೇರಿಗಳಿಂದಲೂ ಸದರಿ ಕಾಲಾನುಕ್ರಮಣಿಕೆ/ದೃಡೀಕರಣವನ್ನು ಕಡ್ಡಾಯವಾಗಿ ಪಡೆಯತಕ್ಕದ್ದು ಮತ್ತು ಕಾಲಾನುಕ್ರಮಣಿಕೆಯನ್ನು ಪರಿಶೀಲಿಸಿ, ಅಸಾಧಾರಣ ವಿಳಂಬ ಪುಸಂಗಗಳಲ್ಲಿ ಸದರಿ ಅಧಿಕಾರಿ/ ಸಿಬ್ಬಂದಿಯವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಮೇಲಿನಂತೆ ಎಲ್ಲಾ ಸೂಚನೆಗಳು, ಉಲ್ಲೇಖಿತ ಸರ್ಕಾರದ ಸುತ್ತೋಲೆಗಳು ಮತ್ತು ವಿಡಿಯೋ ಸಂವಾದಗಳಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸದೇ, ಅನುಕಂಪದ ಆಧಾರದ ಮೇಲಿನ ಪ್ರಸ್ತಾವನೆಗಳನ್ನು ಸರಿಯಾಗಿ ಪರಿಶೀಲಿಸದೆ, ಅಪೂರ್ಣ ಪ್ರಸ್ತಾವನೆಗಳು ಈ ಕಛೇರಿಗೆ ಸಲ್ಲಿಕೆಯಾಗುತ್ತಿದ್ದು, ಸದರಿ ಪ್ರಸ್ತಾವನೆಗಳು ಈ ಕಛೇರಿಯಿಂದ ಮತ್ತು ಮಾನ್ಯ ಪ್ರಾದೇಶಿಕ ಆಯುಕ್ತರು, ಬೆಂಗಳೂರು ಮತ್ತು ಮೈಸೂರು ವಿಭಾಗ ಕಛೇರಿಗಳಿಂದ ಆಕ್ಷೇಪಣೆಗಳು ವ್ಯಕ್ತವಾಗಿರುವುದನ್ನು ತೀವ್ರವಾಗಿ ಪರಿಗಣಿಸಲಾಗಿದೆ. ಇದರಿಂದ, ಕಛೇರಿಗಳಲ್ಲಿ ಕಡತಗಳು ಇತ್ಯರ್ಥಪಡಿಸಲು ಸಾಧ್ಯವಾಗದೇ ಬಾಕಿ ಉಳಿಯುವಂತಾಗಿರುತ್ತದೆ, ಇದರಿಂದ, ಅನಾವಶ್ಯಕವಾಗಿ ಅರ್ಜಿದಾರರಿಗೆ ತೊಂದರೆಯುಂಟಾಗುತ್ತಿರುವುದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.
ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಕ್ರಮವಾಗಿ ಪರಿಶೀಲಿಸಿ, ಅರ್ಜಿದಾರರಿಗೆ ಸೂಕ್ತ ನಿರ್ದೇಶನ ನೀಡಿ, ಅಗತ್ಯವಾದ ಎಲ್ಲಾ ಪೂರಕ ದಾಖಲೆಗಳನ್ನು ಪಡೆದು ಪರಿಶೀಲಿಸಿ ಆಕ್ಷೇಪಣೆ ರಹಿತವಾದ ಹಾಗೂ ಪರಿಪೂರ್ಣವಾದ ಪ್ರಸ್ತಾವನೆಗಳನ್ನು ವಿಳಂಬ ನೀತಿ ಅನುಸರಿಸದೇ ಕಾಲಾನುಕ್ರಮಣಿಕೆಯನ್ನು ಸಹ ದಾಖಲಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದೆ.