ಬೆಂಗಳೂರು : ಸಾರಿಗೆ ನೌಕರರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಸಂಬಂಧ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಸೇವಾವಧಿಯಲ್ಲಿರುವ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾನವೀಯ ನೀತಿ ರೂಪಿಸುವಂತೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದೆ.
ಶಿರಹಟ್ಟಿ ಡಿಪೊನಲ್ಲಿ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದ ಪತಿ ಮರಣ ಹೊಂದಿದ ಬಳಿಕ ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಯೋಮಿತಿ ಮೀರಿದ್ದ ಕಾರಣಕ್ಕೆ ತಿರಸ್ಕರಿಸಿದ್ದ ಕೆಎಸ್ಆರ್ಟಿಸಿ ಗದಗ ವಿಭಾಗೀಯ ನಿಯಂತ್ರಕರ ಕ್ರಮ ಪ್ರಶ್ನಿಸಿ ಲಕ್ಷ್ಮವ್ವ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಮೃತ ನೌಕರನ ಪತ್ನಿಯನ್ನು ನಿಗಮದ ಡಿ ಗ್ರೂಪ್ ಉದ್ಯೋಗಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳ ಅನುಸಾರ ಗರಿಷ್ಠವಯೋಮಿತಿ ಉಲ್ಲೇಖಿಸದೆಯೇ ಶಿರಹಟ್ಟಿಡಿಪೊನಲ್ಲಿ ಡಿ ದರ್ಜೆಯ ಹುದ್ದೆಗೆ ನೇಮಕ ಮಾಡುವಂತೆ ಗದಗ ವಿಭಾಗದ ಕೆಎಸ್ ಆರ್ಟಿಸಿ ವಿಭಾಗೀಯ ನಿಯಂತ್ರಕರಿಗೆ ನಿರ್ದೇಶಿಸಿದೆ.
ಅರ್ಜಿದಾರ ಮಹಿಳೆ ಮೃತ ಉದ್ಯೋಗಿಯ ಪತ್ನಿಯಾಗಿದ್ದು, ಅವರಿಗೆ ಮಕ್ಕಳು ಸಹ ಇಲ್ಲ. ಇಂಥ ಸಂದರ್ಭದಲ್ಲಿ ಗರಿಷ್ಠವಯೋಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಆಕೆಗೆ ಅನ್ಯಾಯವಾಗಲಿದೆ. ಪ್ರತಿವಾದಿಗಳು ಅರ್ಜಿದಾರರಿಗೆ ಅನುಕಂಪದ ಉದ್ಯೋಗ ನಿರಾಕರಿಸಿರುವುದು ಮಾನವೀಯ ನಡೆಯಲ್ಲ. ಇದರಿಂದ, ಮೃತ ಉದ್ಯೋಗಿಯ ಪತ್ನಿಗೆ ಅನ್ಯಾಯವಾಗಿದೆ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆ ಮೂಲಕ ಮಹಿಳೆಗೆ ಉದ್ಯೋಗ ನಿರಾಕರಿಸಿ ನೀಡಲಾಗಿದ್ದ ಹಿಂಬರಹಗಳನ್ನು ರದ್ದುಪಡಿಸಿದೆ.