ಬೆಂಗಳೂರು : ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಕ್ರಮ ಬದ್ಧವಲ್ಲದ ನಿವೇಶನ ಹಾಗೂ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳುತ್ತಿದ್ದು, 2013ಕ್ಕೆ ಮೊದಲು ಅಥವಾ ನಂತರ ನೋಂದಣಿಯಾದ ಎಲ್ಲಾ ನಿವೇಶನ ಹಾಗೂ ಕಟ್ಟಡಗಳಿಗೂ ಇ-ಖಾತೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶೋತ್ತರ ಅವಧಿಯಲ್ಲಿ ಮೇಲುಕೋಟೆ ಸದಸ್ಯ ದರ್ಶನ್ ಪುಟ್ಟಣ್ಣಯ್ಯ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದು, ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 2013ಕ್ಕಿಂತ ಮೊದಲು ನೋಂದಣಿಯಾದ ನಿವೇಶನಗಳಿಗೆ ಇ-ಖಾತಾ ಅಭಿಯಾನ ಮಾಡಲಾಗುತ್ತಿದೆ. ಆದರೆ 2013ರ ನಂತರನೋಂದಣಿಯಾದ ನಿವೇಶನಗಳಿಗೆ ಇ-ಖಾತೆ ಮಾಡದೆ ತಿರಸ್ಕಾರ ಮಾಡುತ್ತಿದ್ದು, ಒಂದೇ ಕಡೆ ಎರಡು ರೀತಿಯ ನಿಯಮ ಅನುಸರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಗ್ರಾಪಂಗಳ ವ್ಯಾಪ್ತಿಯಲ್ಲಿ ಕ್ರಮ ಬದ್ಧವಲ್ಲದ ನಿವೇಶನಗಳು ಮತ್ತು ಕಟ್ಟಡಗಳಿಗೆ ಇ-ಖಾತಾ ನೀಡಲು ಸರ್ಕಾರ ಬದ್ಧವಾಗಿದೆ. ಸರ್ಕಾರಿ, ಸ್ಥಳೀಯ ಸಂಸ್ಥೆ, ಶಾಸನಬದ್ದ ಸಂಸ್ಥೆ, ಅರಣ್ಯ ಭೂಮಿಯನ್ನು ಹೊರತುಪಡಿಸಿ ಉಳಿದ ಖಾಸಗಿ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ-1993ಕ್ಕೆ ತಿದ್ದುಪಡಿ ತರುತ್ತೇವೆ. ಬಳಿಕ ಸೂಕ್ತ ನಿಯಮಗಳನ್ನು ರೂಪಿಸಿ 2013 ಜೂ.14ರ ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನ, ಕಟ್ಟಡಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.