ಬೆಂಗಳೂರು : ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಸಕಾಲದಲ್ಲಿ ಇಲಾಖಾ ವಿಚಾರಣೆ ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಸೂಚನೆಗಳನ್ನು ಹೊರಡಿಸಿದೆ.
ನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ವಿರುದ್ಧ ಅವರು ಸೇವೆಯಲ್ಲಿರುವಾಗ ಎಸಗಿದ ದುರ್ನಡತೆಗಾಗಿ ಕ್ಷುಪ್ತ ಸಮಯದಲ್ಲಿ ಅಂದರೆ ಅಂತಹ ನೌಕರ ಸೇವೆಯಿಂದ ನಿವೃತ್ತಿ ಹೊಂದುವ ಸಾಕಷ್ಟು ಪೂರ್ವದಲ್ಲಿಯೇ ಶಿಸ್ತಿನ ಕ್ರಮ ಆರಂಭಿಸುವಂತೆ ಹಾಗೂ ಇತ್ಯರ್ಥಪಡಿಸುವಂತೆ ಮೇಲೆ ಉಲ್ಲೇಖಿಸಿರುವ ಹಲವಾರು ಸುತ್ತೋಲೆ ಹಾಗೂ ಅಧಿಕೃತ ಜ್ಞಾಪನಗಳಲ್ಲಿ ಸರ್ಕಾರದಿಂದ ಕಾಲ ಕಾಲಕ್ಕೆ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ನೌಕರನ ನಿವೃತ್ತಿ ನಂತರದ ಶಿಸ್ತು ಕ್ರಮಗಳನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಗಳು 1957 ರಡಿ ಕೈಗೊಳ್ಳಲು ಅವಕಾಶವಿರುವುದಿಲ್ಲ. ಅಂತಹ ಶಿಸ್ತಿನ ಕ್ರಮವನ್ನು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 214 ರಡಿ ಮಾತ್ರ ಕೈಗೊಳ್ಳಲು ಅವಕಾಶವಿರುತ್ತದೆ. ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ವಿಚಾರಣೆಗಳನ್ನು ಸರ್ಕಾರಕ್ಕೆ ಆತನಿಂದ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣದ ಮೇಲೆ ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರಕ್ಕೆ ಬರುತ್ತಿವೆ. ಇದು ಸರಿಯಲ್ಲ. ಇದಲ್ಲದೇ ಸರ್ಕಾರಿ ನೌಕರ ನಿವೃತ್ತಿ ಹೊಂದುವ ಕೆಲವೇ ದಿನಗಳ ಮೊದಲು ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಲ್ಲಿಸಲಾಗುತ್ತಿರುವುದನ್ನು ಕೂಡ ಗಮನಿಸಲಾಗಿದೆ.
ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಎಸಗಿದ ದುರ್ನಡತೆಗೆ ಸಂಬಂಧಿಸಿದಂತೆ ಆತ ನಿವೃತ್ತಿ ಹೊಂದುವವರೆಗೆ ಯಾವುದೇ ಕ್ರಮವಹಿಸದೆ ಅಥವಾ ನಿವೃತ್ತಿ ನಿಕಟಪೂರ್ವದಲ್ಲಿ ಅಂತಹ ಶಿಸ್ತಿನ ಕ್ರಮ ಆರಂಭಿಸುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಇದರಿಂದ ಅಂತಹ ಸರ್ಕಾರಿ ನೌಕರನ ವಿರುದ್ಧ ಪರಿಣಾಮಕಾರಿಯಾಗಿ ಶಿಸ್ತು ಕ್ರಮ ಕೈಗೊಳ್ಳಲು ಆಸ್ಪದವಾಗದೆ ಅಂತಹ ತಪ್ಪಿತಸ್ಥ ನೌಕರನು ರಕ್ಷಿಸಲ್ಪಡುವನಲ್ಲದೆ ಇದು ಸರ್ಕಾರದ ಹಿತಾಸಕ್ತಿಗೆ ಕೂಡ ಮಾರಕವಾಗಿರುತ್ತದೆ. ಮುಂದುವರೆದು ಕೆಲವು ಸಂದರ್ಭಗಳಲ್ಲಿ ದುರ್ನಡತೆಯು ಸರ್ಕಾರಿ ನೌಕರ ನಿವೃತ್ತಿ ಹೊಂದಿದ ನಾಲ್ಕು ವರ್ಷಕ್ಕೂ ಹಿಂದಿನ ಅವಧಿಗೆ ಸಂಬಂಧಿಸಿದೆ ಎಂಬ ಕಾರಣದ ಆಧಾರದ ಮೇಲೆ ಆತನ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 214 (ಬಿ)(ii)ರನ್ವಯ ಶಿಸ್ತಿನ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂಬ ಅನಿವಾರ್ಯ ನಿಲುವಿಗೆ ಬರಲಾಗುತ್ತಿದೆ.
ಯಾವುದೇ ನಿವೃತ್ತ ಸರ್ಕಾರಿ ನೌಕರರ ವಿರುದ್ಧ ಶಿಸ್ತಿನ ಕ್ರಮ ಆರಂಭಿಸಲು ಸಂಬಂಧಪಟ್ಟ ಸಚಿವಾಲಯದ ಆಡಳಿತ ಇಲಾಖೆಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 214 ರಡಿ ಕ್ರಮವಹಿಸಬೇಕಾಗಿರುವುದರಿಂದ ಅಂತಹ ಪ್ರಕರಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಉಲ್ಲೇಖ (9)ರ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ಹೊರಡಿಸಲಾದ ದಿನಾಂಕ 21.01.2019ರ ಸುತ್ತೋಲೆಯಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗಿದೆ. ಅದರಲ್ಲಿ ನೀಡಲಾದ ಸೂಚನೆಗಳನ್ನು ಎಲ್ಲಾ ಶಿಸ್ತು ಪ್ರಾಧಿಕಾರಿಗಳ ಗಮನಕ್ಕೆ ತರುವಂತೆ ಈ ಮೂಲಕ ಮತ್ತೊಮ್ಮೆ ತಿಳಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಶಿಸ್ತು ಕ್ರಮದ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋನಿವೃತ್ತಿ ಹೊಂದುವ ಕನಿಷ್ಠ 30 ದಿನಗಳ ಮುಂಚೆಯೇ ಕರಡು ದೋಷಾರೋಪಣ ಪಟ್ಟಿ ಮತ್ತು ಇನ್ನಿತರೆ ಪೂರಕ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತು ಪ್ರಾಧಿಕಾರಿಗೆ ಸಲ್ಲಿಸುವಂತೆ ಮರುಸೂಚನೆಗಳನ್ನು ನೀಡಲಾಗಿದೆ. ಮುಂದುವರೆದು, ಯಾವುದೇ ಸರ್ಕಾರಿ ನೌಕರನು ಎಸಗಿದ ದುರ್ನಡತೆಯು ಶಿಸ್ತು ಪ್ರಾಧಿಕಾರಿಗಳ ಗಮನಕ್ಕೆ ಬಂದ ಸಂದರ್ಭದಲ್ಲಿ ಹಾಗೂ ಅಂತಹ ಸರ್ಕಾರಿ ನೌಕರ ನಿವೃತ್ತಿ ಅಂಚಿನಲ್ಲಿದ್ದಲ್ಲಿ ಸಂಬಂಧಪಟ್ಟ ಶಿಸ್ತು ಪ್ರಾಧಿಕಾರಿಗಳು ಯಾವುದೇ ಅನಗತ್ಯ ಹಾಗೂ ಉದ್ದೇಶಪೂರ್ವಕ ವಿಳಂಬಕ್ಕೆ ಆಸ್ಪದ ಕಲ್ಪಿಸದೇ ಅಂತಹ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದೆಂದು ಕೂಡ ತಿಳಿಸಲಾಗಿದೆ. ಕಾಲಮಿತಿ ಮೀರಿದ ಪ್ರಕರಣಗಳಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು/ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸತಕ್ಕದ್ದು ಎಂದು ಕೂಡ ತಿಳಿಸಲಾಗಿದೆ.