ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಸ್ಥಿತಿ ಘೋಷಿಸುವಂತೆ ಸಂಸದ ಡಾ.ಸಿ.ಎನ್. ಮಂಜುನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಹೀಗಾಗಿ ವೈದ್ಯಕೀಯ ತುರ್ತು ಸ್ಥಿತಿ ಘೋಷಿಸಬೇಕು. ಡೆಂಗ್ಯೂ ಜ್ವರ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ, ಡೆಂಗ್ಯೂ ಕಾಯಿಲೆಗೆ ನಿಖರವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯವಾಗಿದೆ. ಡೆಂಗ್ಯೂ ಜ್ವರ ನಿಯಂತ್ರಣ ಆಗದೇ ಇದ್ದಲ್ಲಿ ಮಾರಕ ಕಾಯಿಲೆಗಳಾದ ಚಿಕೂನ್ ಗುನ್ಯಾ, ಝೀಕಾ ವೈರಸ್ ಬರಬಹುದು ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಶನಿವಾರ ಒಂದೇ ದಿನ 175 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,000 ಗಡಿ ದಾಟಿದೆ. ಒಂದೇ ತಿಂಗಳಲ್ಲಿ ಆರು ಮಂದಿ ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಈ ವರ್ಷ 93012 ಡೆಂಗೆ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 40918 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. ಒಟ್ಟು 5,098 ಮಂದಿಗೆ ಡೆಂಗ್ಯೂ ದೃಪಟ್ಟಿದ್ದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,908 ಮಂದಿ ಸೇರಿ ಒಟ್ಟು 7006 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ.
ಶನಿವಾರ ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 115, ಮಂಡ್ಯ 26, ಗದಗ 8, ವಿಜಯಪುರ 9, ಉಡುಪಿ 2, ಉತ್ತರ ಕನ್ನಡ, ಬಳ್ಳಾರಿ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.