ಬೆಂಗಳೂರು : ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್.ಕೃಷ್ಣ ಅವರ ನಿವಾಸದಲ್ಲಿ ಅವರ ಪಾರ್ಥಿವ ಶರೀರಕ್ಕೆ ನಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ರಾಜಕೀಯ ಗುರುವಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಎಸ್ಎಮ್ ಕೃಷ್ಣ ಅವರ ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಹಲವು ಗಣ್ಯರು ರಾಜಕೀಯ ನಾಯಕರು ಅವರ ಅಂತಿಮ ದರ್ಶನ ಪಡೆದು ಸಂತಾಪಸೂಚಿಸಿದರು.ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅವರ ಕಾಲಿಗೆ ನಮಿಸಿ ಕಣ್ಣೀರು ಹಾಕಿ ಸಂತಾಪ ಸೂಚಿಸಿದರು. ಏಕೆಂದರೆ ಡಿ ಕೆ ಶಿವಕುಮಾರ್ ಅವರ ರಾಜಕೀಯ ಗುರು ಎಸ್ ಎಂ ಕೃಷ್ಣ ಅವರು ಆಗಿದ್ದರು. ಅವರ ಗರಡಿಯಲ್ಲಿ ಡಿಕೆ ಶಿವಕುಮಾರ್ ಅವರು ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದಿದ್ದಾರೆ. ಕಾಲಿಗೆ ನಮಸ್ಕರಿಸುವ ವೇಳೆ ಬಿಕ್ಕಿ ಬಿಕ್ಕಿ ಅತ್ತಿರುವ ದೃಶ್ಯ ಕಂಡು ಬಂದಿತು.
ಇನ್ನು ಈ ಬಗ್ಗೆ ಭಾವುಕರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್, , ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಎಂ ಕೃಷ್ಣ ಅವರ ಸದಾಶಿವನಗರ ನಿವಾಸಕ್ಕೆ ಇಂದು ಭೇಟಿ ಅಂತಿಮ ದರ್ಶನ ಪಡೆದೆ. ನನ್ನ ರಾಜಕೀಯ ಮಾರ್ಗದರ್ಶಿಗಳಾಗಿದ್ದ ಕೃಷ್ಣ ಅವರ ಜೊತೆ ಕಳೆದ ನೆನಪುಗಳು ಸ್ಮೃತಿಪಟಲದಲ್ಲಿ ಹಾದುಹೋದವು. ಅವರ ದೂರದೃಷ್ಟಿಯ ನಾಯಕತ್ವ ಹಾಗೂ ಕರ್ನಾಟಕಕ್ಕೆ ನೀಡಿದ ಕೊಡುಗೆಗಳು ಅವಿಸ್ಮರಣೀಯ ಎಂದು ಹೇಳಿದ್ದಾರೆ.