ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭ ಕೋವಿಡ್ 19 ಚಿಕಿತ್ಸೆ ಹಾಗೂ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಿದ್ದ ಆಯೋಗವು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರನ್ನು ತನಿಖೆ ನಡೆಸಲು ಶಿಫಾರಸ್ಸು ಮಾಡಿದೆ.
ಏಪ್ರಿಲ್ 2020ರಲ್ಲಿ ಚೀನಾದ ಎರಡು ಕಂಪನಿಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ಅತ್ಯಂತ ದುಬಾರಿ ದರಗಳಲ್ಲಿ ಖರೀದಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣವಿಲ್ಲ ಎಂಬುದು ‘ದಿ ಹಿಂದೂ’ಗೆ ಲಭ್ಯವಿರುವ ಡಿ ಕುನ್ಹಾ ಅವರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪಿಪಿಇ ಕಿಟ್ ಖರೀದಿ ಪ್ರಕ್ರಿಯೆ ಸಂದರ್ಭ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತು ಬಿ. ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿಶ್ವಾಸಾರ್ಹತೆ ಉಲ್ಲಂಘನೆ ಅಪರಾಧದ ಅನ್ವಯ ಸೆಕ್ಷನ್ 7 ಮತ್ತು 11ರ ಅಡಿ ತನಿಖೆ ನಡೆಸುವಂತೆ ಆಯೋಗವು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದೆ.
ಆಗಸ್ಟ್ 31ರಂದು ಡಿ ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಸ್ತುತ ಸಂಪುಟದ ಉಪ ಸಮಿತಿಯು ವರದಿಯನ್ನು ಪರಿಶೀಲಿಸುತ್ತಿದೆ.
ಚೀನಾದಿಂದ ಪಿಪಿಇ ಕಿಟ್
ಚೀನಾದ ಡಿಎಚ್‌ಬಿ ಗ್ಲೋಬಲ್ ಹಾಂಗ್ ಕಾಂಗ್ ಮತ್ತು ಬಿಗ್ ಫಾರ್ಮಾಸ್ಯೂಟಿಕಲ್ಸ್‌ನಿಂದ ಪ್ರತಿ ಯನಿಟ್‌ಗೆ 2,000 ರೂ. ನಂತೆ 3 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ಖರೀದಿ ಪ್ರಕ್ರಿಯೆಯು ಯಾವುದೇ ಟೆಂಡರ್ ಕರೆಯದೆ ಅಥವಾ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ವಿನಾಯಿತಿಯನ್ನು ಪಡೆಯದೆ ನೇರವಾಗಿ ನಡೆದಿದೆ .
“ಸಂಗ್ರಹಣೆ ನಿಯಮದ ಮೂಲ ಕಾರ್ಯವಿಧಾನವನ್ನು ಅನುಸರಿಸದೆ ನೇರವಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆದೇಶದಂತೆ ಪಿಪಿಇ ಕಿಟ್‌ಗಳ ಸಂಗ್ರಹಣೆ ಮಾಡಲಾಗಿದೆ” ಎಂದು ವರದಿ ಹೇಳಿದೆ.
“ಪಿಪಿಇ ಕಿಟ್ ಖರೀದಿಯ ಇಡೀ ಪ್ರಕ್ರಿಯೆಯು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆಪ್ತ ಪೂರೈಕೆದಾರರಿಗೆ ಅನುಕೂಲ ಮತ್ತು ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಿದೆ” ಎಂದೂ ವರದಿ ತಿಳಿಸಿದೆ.