ಬೆಂಗಳೂರು : 2025 ನೇ ಸಾಲಿಗೆ ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸಿಲಿಂಗ್ ನಡೆಸುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಬೋಧಕರ (ಪ್ರಾಧ್ಯಾಪಕರು, ಸಹ/ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು ಮತ್ತು ಕ್ರೀಡಾ & ದೈಹಿಕ ಶಿಕ್ಷಣ ನಿರ್ದೇಶಕರು) ವರ್ಗಾವಣೆಗಳನ್ನು ನಿಯಂತ್ರಿಸುವ ಸಲುವಾಗಿ ಉಲ್ಲೇಖ (1) ರ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಂತ್ರಣ) ನಿಯಮಗಳು-2021 ನ್ನು ಹಾಗೂ ಉಲ್ಲೇಖ (2 & 3)ರಲ್ಲಿ ಸದರಿ ನಿಯಮಗಳ ಕೆಲವೊಂದು ಅಂಶಗಳಿಗೆ ತಿದ್ದುಪಡಿಯನ್ನು ಮಾಡಿ ಅಧಿಸೂಚಿಸಲಾಗಿದೆ.
ಸದರಿ ವರ್ಗಾವಣೆ ನಿಯಮಗಳ ನಿಯಮ 8 ರಲ್ಲಿ ಸಾರ್ವಜನಿಕ ಹಿತದೃಷ್ಟಿಯ ಕಡ್ಡಾಯ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆಗಳನ್ನು ಪ್ರತಿ ಕ್ಯಾಲೆಂಡರ್ ವರ್ಷದ ಮೇ ಮತ್ತು ಜುಲೈ ಮಾಹೆಯ ನಡುವೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
ಮೇಲ್ಕಂಡ ನಿಯಮದನ್ವಯ ಮಂಜೂರಾದ ಬೋಧಕರ ಹುದ್ದೆಗಳ ಶೇಕಡಾ 9 ರಷ್ಟು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆಗಳು ಹಾಗೂ ಶೇಕಡಾ 6 ರಷ್ಟು ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆ ನಡೆಸಲು ಅವಕಾಶವಿದ್ದು ಅದರಂತೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲು ಉದ್ದೇಶಿಸಲಾಗಿರುತ್ತದೆ.
ವರ್ಗಾವಣೆ ನಿಯಮಗಳ ನಿಯಮ 4ರ ಉಪನಿಯಮ 3 ಮತ್ತು 4 (ಎ) ರಲ್ಲಿ ಹೇಳಿರುವ ವಿಶೇಷ ಪ್ರಕರಣಗಳಿಗೆ ಅನ್ವಯಿಸುವ ಬೋಧಕರು ಅಗತ್ಯ ದಾಖಲೆಗಳೊಂದಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯಗೊಳಿಸುವ Online ನಮೂನೆಯಲ್ಲಿ ನಿಗದಿತ ದಿನಾಂಕದ ಒಳಗೆ ವರ್ಗಾವಣೆ ಅರ್ಜಿ ಸಲ್ಲಿಸುವುದು, ನಿಗದಿತ ಕೊನೆಯ ದಿನಾಂಕದ ನಂತರ ಮತ್ತು ಅಗತ್ಯ ದಾಖಲಾತಿಗಳಿಲ್ಲದೆ ಸಲ್ಲಿಸಿದ ವರ್ಗಾವಣೆ ಅರ್ಜಿಗಳನ್ನು ತಿರಸ್ಕರಿಸಲಾಗುವುದು.