ಬೆಂಗಳೂರು : ರಾಜ್ಯ/ ಜಿಲ್ಲೆ/ ತಾಲ್ಲೂಕು ಮಟ್ಟದಲ್ಲಿ ಸಂವಿಧಾನ ದಿನಾಚರಣೆಯನ್ನು ದಿನಾಂಕ: 26.11.2025 ರಂದು ಆಯೋಜಿಸುವ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರ ಏಕ ಕಡತದ ಪ್ರಸ್ತಾವನೆಯಲ್ಲಿ ದಿನಾಂಕ: 26-11-2025 ರಂದು ದೇಶದಾದ್ಯಂತ ಸಂವಿಧಾನ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದ್ದು, ಕರ್ನಾಟಕ ರಾಜ್ಯದಲ್ಲಿಯೂ ಸಹ ಸದರಿ ದಿನದಂದು ಸಂವಿಧಾನ ದಿನಾಚರಣೆಯನ್ನು ರಾಜ್ಯ/ ಜಿಲ್ಲೆ/ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಸಂವಿಧಾನ ದಿನಾಚರಣೆಯನ್ನು ಈ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಪ್ರೌಢಶಾಲೆ/ ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ/ ತಾಲೂಕು ಮಟ್ಟದಲ್ಲಿ ರಾಷ್ಟ್ರಧ್ವಜಗಳ ಪ್ರದರ್ಶನದೊಂದಿಗೆ ವಿದ್ಯಾರ್ಥಿಗಳು ಸಂವಿಧಾನ ಪುಸ್ತಕಗಳನ್ನು ಪ್ರದರ್ಶಿಸುವುದರೊಂದಿಗೆ ಜಾಥಾಗಳನ್ನು ಹಮ್ಮಿಕೊಳ್ಳುವುದು.
ಸದರಿ ಸಂವಿಧಾನ ಪುಸ್ತಕಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯಿಂದ ಪೂರೈಸಲು ಕ್ರಮವಹಿಸುವುದು.
ಸದರಿ ಜಾಥಾದಲ್ಲಿ ಸಂವಿಧಾನದ ಕುರಿತು ಡಾ. ಬಿ. ಆರ್. ಅಂಬೇಡ್ಕರ್ ರವರ ಪ್ರಮುಖ ನುಡಿಮುತ್ತು (Quotes) ಗಳನ್ನು placard ನಲ್ಲಿ ಪ್ರದರ್ಶಿಸುವುದು.
ಜಿಲ್ಲಾ / ತಾಲೂಕು ಕೇಂದ್ರದಲ್ಲಿನ ಅಂಬೇಡ್ಕರ್ ಭವನ/ ಇತರೇ ಸಭಾ ಭವನದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ಉಪನ್ಯಾಸಗಳನ್ನು ನೀಡುವುದರ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಆಯೋಜಿಸಲಾದ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡುವುದು.
ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆ ಮಾಡುವುದು.
ಸಂವಿಧಾನ ದಿನಾಚರಣೆ ವೆಚ್ಚಕ್ಕಾಗಿ ಪ್ರತಿ ಜಿಲ್ಲೆಗೆ ರೂ.2.50 ಲಕ್ಷಗಳ (ರೂ. ಎರಡು ಲಕ್ಷದ ಐವತ್ತು ಸಾವಿರ ಮಾತ್ರ) ಅನುದಾನ ಬಿಡುಗಡೆ ಮಾಡುವುದು. ಸದರಿ ಕಾರ್ಯಕ್ರಮಕ್ಕೆ ಹೆಚ್ಚುವರಿ ವೆಚ್ಚವಾದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಭರಿಸುವುದು.
ಜಿಲ್ಲಾ ಕೇಂದ್ರದ ತಾಲ್ಲೂಕುಗಳನ್ನು ಹೊರತು ಪಡಿಸಿ, ಪ್ರತಿ ತಾಲ್ಲೂಕಿಗೆ ರೂ1.00 ಲಕ್ಷಗಳ (ರೂ. ಒಂದು ಲಕ್ಷ ಮಾತ್ರ) ಅನುದಾನವನ್ನು ಸಂವಿಧಾನ ದಿನಾಚರಣೆಗೆ ಬಿಡುಗಡೆ ಮಾಡುವುದು. ಸದರಿ ಕಾರ್ಯ ಕ್ರಮಕ್ಕೆ ಹೆಚ್ಚುವರಿ ವೆಚ್ಚವಾದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಭರಿಸುವುದು.
ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೂಕ್ತ ಶಿಷ್ಟಾಚಾರವನ್ನು ಪಾಲಿಸಿ, ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.









