ಬೆಂಗಳೂರು : ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಶಿಕ್ಷಕರ/ಅಧಿಕಾರಿಗಳ/ಬೋಧಕೇತರ ನೌಕರರ ಸೇವಾ ವಿವರಗಳನ್ನು ಗಣಕೀಕರಿಸಿ ಅಂತಿಮಗೊಳಿಸುವ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯಕ್ಕೆ ಸಂಬಂದಿಸಿದಂತೆ ಈಗಾಗಲೇ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರ/ಸಹಶಿಕ್ಷಕರ/ದೈಹಿಕ/ವಿಶೇಷ ಶಿಕ್ಷಕರ ಹಾಗೂ ತತ್ಸಮಾನ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ, ಎಲ್ಲಾ ಶಿಕ್ಷಕರ/ಎಲ್ಲಾ ಅಧಿಕಾರಿಗಳ/ಎಲ್ಲಾ ಬೋದಕೇತರ ನೌಕರರ ಮಾಹಿತಿಯ ಇಂದೀಕರಣಕ್ಕೆ ಸಂಬಂಧಿಸಿದಂತೆ, ಪ್ರತಿವರ್ಷ EEDS ತಂತ್ರಾಂಶದಲ್ಲಿ ಮಾಹಿತಿಗಳನ್ನು ಇಂದೀಕರಿಸಲಾಗುತ್ತದೆ. ಮುಂದುವರದು ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಇ.ಇ.ಡಿ.ಎಸ್ ನಲ್ಲಿ ಇರುವ ಸೇವಾ ಮಾಹಿತಿಯು ಅಂತಿಮವಾಗಿರುವುದರಿಂದ ಈ ಕೆಳಕಂಡ ಅಂಶಗಳ ಸೇವಾ ವಿವರಗಳನ್ನು ನಿಖರವಾಗಿ ಇ.ಇ.ಡಿ.ಎಸ್ ತಂತ್ರಾಂಶದಲ್ಲಿ ಗಣಕೀಕರಣ ಮಾಡಿ ದಿನಾಂಕ:30/01/2026ರೊಳಗೆ ಅಂತಿಮಗೊಳಿಸಲು ಆಯಾ ಬಟವಾಡೆ ಅಧಿಕಾರಿಗಳು ಈ ಕೆಳಕಂಡ ನಿರ್ದೇಶನದಂತೆ ಕ್ರಮವಹಿಸುವುದು.
ಇಂದೀಕರಿಸ ಬೇಕಾದ ಮೂಲಭೂತ ಮಾಹಿತಿಗಳು ( Basic details)
1. ಶಿಕ್ಷಕರ ಕ್ರಮಬದ್ಧವಾದ ಪ್ರಥಮ ಕೆ.ಜಿ.ಐ.ಡಿ ಸಂಖ್ಯೆ ನಮೂದಾಗಿರುವ ಬಗ್ಗೆ ಪರಿಶೀಲಿಸುವುದು. ತಂತ್ರಾಂಶದ ವರದಿಗಳನ್ನು ಗಮನಿಸಿದಂತೆ ಕೆಲವು ಪ್ರಕರಣಗಳಲ್ಲಿ ಎರಡೆರಡು ಕೆ.ಜಿ.ಐ.ಡಿ ಸಂಖ್ಯೆಗಳನ್ನು ನಮೂದಿಸಿ ಸೇವಾ ವಿವರಗಳನ್ನು ಅಂತಿಮಗೊಳಿಸಿರುವುದು ಕಂಡುಬಂದಿರುತ್ತದೆ. ಇದು ಸಾಕಷ್ಟು ಗೊಂದಲಗಳಿಗೆ ಅವಕಾಶ ಮಾಡಿಕೊಡುವುದರಿಂದ ಪ್ರತಿಯೊಬ್ಬ ಶಿಕ್ಷಕರ ಮೊದಲನೇ ಕೆ.ಜಿ.ಐ.ಡಿ ಸಂಖ್ಯೆಯಡಿ ಸೇವಾ ವಿವರಗಳನ್ನು ಅಂತಿಮಗೊಳಿಸಿ ಉಳಿದ ವಿವರಗಳನ್ನು ತಂತ್ರಾಂಶದಿಂದ ತೆಗೆದುಹಾಕಲು ಕ್ರಮವಹಿಸುವುದು.
2. ಶಿಕ್ಷಕರ ಹೆಸರು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕ್ರಮಬದ್ದವಾಗಿರುವ ಬಗ್ಗೆ ಪರಿಶೀಲಿಸುವುದು. ಕನ್ನಡ ಹಾಗೂ ಆಂಗ್ಲ ಹೆಸರುಗಳನ್ನು ಇ.ಇ.ಡಿ.ಎಸ್ ನಲ್ಲಿ ತಪ್ಪಾಗಿ ನಮೂದಿಸಿದ್ದು ತಿದ್ದುಪಡಿಗಾಗಿ ಹೆಚ್ಚಿನ ಅರ್ಜಿಗಳು ತಾಲ್ಲೂಕು/ಜಿಲ್ಲಾ ಹಂತದಿಂದ ಈ ಕಛೇರಿಗೆ ಸಲ್ಲಿಕೆಯಾಗುತ್ತಿದೆ. ಆದ್ದರಿಂದ ಶಿಕ್ಷಕರ ಸೇವಾವಹಿ ಹಾಗೂ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿರುವಂತೆ ಸರಿಯಾದ ಮಾಹಿತಿಯನ್ನು ಇಂದೀಕರಿಸುವುದು. ಇನ್ನು ಮುಂದೆ ಇಂತಹ ಅರ್ಜಿಗಳು ಸಲ್ಲಿಕೆಯಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.
3. ಶಿಕ್ಷಕರ ಜನ್ಮದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ ಮುಂತಾದ ಅಂಶಗಳು ಕ್ರಮಬದ್ದವಾಗಿ ನಮೂದಾಗಿರುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವುದು. ಕೆ.ಜಿ.ಐ.ಡಿ. ಸಂಖ್ಯೆಗಳ ತಿದ್ದುಪಡಿಗೆ ಅರ್ಜಿ ಸಲ್ಲಿಕೆಯಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು.
4. ಬೋಧಕ ಮತ್ತು ಬೋಧಕೇತರರ ಧರ್ಮ, ಪ್ರವರ್ಗ ಮತ್ತು ಉಪಜಾತಿಗಳನ್ನು ಈಗಾಗಲೇ ರಾಜ್ಯ ಕಛೇರಿಯ ನಿರ್ದೇಶನದಂತೆ ತಮ್ಮ ಹಂತದಲ್ಲಿ ಭರ್ತಿಮಾಡಲಾಗಿದ್ದು, ಸದರಿ ನಮೂದುಗಳಲ್ಲಿ ವ್ಯತ್ಯಾಸಗಳಿರುವುದು ಕಂಡು ಬಂದಿದ್ದು ತಪ್ಪುಗಳಿದ್ದಲ್ಲಿ ಸರಿಪಡಿಸತಕ್ಕದ್ದು.
5. ಬೋಧಕ ಮತ್ತು ಬೋಧಕೇತರು ವಿಶೇಷ ಚೇತನರಾಗಿದ್ದಲ್ಲಿ ಮಾಹಿತಿಯನ್ನು ಇಂದೀಕರಿಸತಕ್ಕದ್ದು.









