ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೇವಲ ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ಸುಪ್ರೀಂಕೋರ್ಟ್ ಆದೇಶದಂತೆ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ಇದೆ.
ಇದೆ ವೇಳೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 8 ರಿಂದ 10ರ ವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ಬೆಂಗಳೂರು ಪೊಲೀಸ್ ಇಲಾಖೆಯು ಪಟಾಕಿ ಸಿಡಿಸುವ ಕುರಿತಾಗಿ ಮಾರ್ಗಸೂಚಿ ಪ್ರಕಟಿಸಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
1) ಹಸಿರು ಪಟಾಕಿಗಳನ್ನೇ ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು.
2) ಹಸಿರು ಪಟಾಕಿ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಳ್ಳಬೇಕು.
3) ಅಧಿಕೃತ ಪರವಾನಗಿ ಪಡೆದ ಅಂಗಡಿ / ಮಳಿಗೆಗಳಿಂದಲೇ ಪಟಾಕಿ ಖರೀದಿಸಬೇಕು.
4) ಕೆಲವು ಅಂಗಡಿಗಳಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುವ ಸಾಧ್ಯತೆಯಿದ್ದು, ಅಂತಹ ಸ್ಥಳದಲ್ಲಿ ಪಟಾಕಿ ಖರೀದಿಸಬಾರದು.
5) ಹೆಚ್ಚು ಶಬ್ದ ಹಾಗೂ ವಾಯುಮಾಲಿನ್ಯ ಉಂಟು ಮಾಡುವ ಪಟಾಕಿ ಖರೀದಿಸುವುದು ಬೇಡ.
6) ಚಿಕ್ಕ ಮಕ್ಕಳಿಗೆ ಪಟಾಕಿ ಹಚ್ಚಲು ಅವಕಾಶ ಕೊಡಬಾರದು. ಪೋಷಕರು ಜೊತೆಗಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿ ವಹಿಸಬೇಕು.
7) ಜನದಟ್ಟಣೆ ಪ್ರದೇಶ, ಮುಖ್ಯ ರಸ್ತೆ ಹಾಗೂ ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು.
8) ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಬೇಕು.
9) ಪಟಾಕಿ ಸಿಡಿಸುವಾಗ ಪ್ರಾಣಿಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.
10) ಅವಘಡಗಳು ಸಂಭವಿಸಿದಲ್ಲಿ 112 ಹಾಗೂ 108ಕ್ಕೆ ಸಂಪರ್ಕಿಸಬೇಕು. ವೈದ್ಯರ ಸಲಹೆ ಪಡೆದುಕೊಳ್ಳಬೇಕು.
11) ಸಿಡಿಯದ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಅಪಾಯಕಾರಿ.
12) ಪಟಾಕಿ ಸಿಡಿಸಿದ ನಂತರ ಮೈದಾನ, ರಸ್ತೆಗಳು, ಮನೆ ಮುಂದಿನ ಅಂಗಳದ ಸ್ವಚ್ಛತೆ ಕಾಪಾಡಬೇಕು.
13) ನಿಗದಿತ ಸಮಯ ಮೀರಿ ಪಟಾಕಿ ಸಿಡಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
14) ಹೆಚ್ಚು ಶಬ್ದದ ಪಟಾಕಿ ಹಚ್ಚುವುದರಿಂದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಸಂಭವವಿದೆ. ಹಾಗಾಗಿ ಕಡಿಮೆ ಶಬ್ದ ಹೊರಹೊಮ್ಮುವ ಹಸಿರು ಪಟಾಕಿಗಳನ್ನೇ ಬಳಸುವುದು ಸೂಕ್ತ.
15) ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗೌಸ್ ಧರಿಸಬೇಕು. ಕಣ್ಣುಗಳಿಗೆ ಸುರಕ್ಷತಾ ಕನ್ನಡಕ ಧರಿಸಬೇಕು.
16) ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸುವುದು ಬೇಡ.
17) ಪಟಾಕಿ ಹಚ್ಚುವ ವೇಳೆ ಬಟ್ಟೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹತ್ತಿಯ ಬಟ್ಟೆ ಧರಿಸುವುದು ಉತ್ತಮ. ಆದಷ್ಟೂ ಸಿಂಥೆಟಿಕ್, ನೈಲಾನ್, ಪಾಲಿಯಸ್ಟರ್ ಬಟ್ಟೆ ಧರಿಸುವುದು ಬೇಡ.
18) ಕೈಯಲ್ಲಿ ಪಟಾಕಿ ಹಿಡಿದು ಹಚ್ಚುವುದು ಅಪಾಯಕಾರಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹತ್ತಿರದಲ್ಲೇ ಇಟ್ಟುಕೊಳ್ಳಬೇಕು.