ಬೆಂಗಳೂರು : ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನವನ್ನು ಎಸ್.ಸಿ / ಎಸ್.ಟಿ ಸಮುದಾಯದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುತ್ತಿದೆಯೇ ವಿನಃ ಒಂದು ರೂಪಾಯಿ ಕೂಡ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಬಜೆಟ್ ನ ಅಭಿವೃದ್ಧಿ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡುವ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ಬಡ್ತಿಯಲ್ಲಿ ಮೀಸಲಾತಿ ನೀಡಲು ಮಸೂದೆ ಜಾರಿ ಮಾಡಿದ್ದು, ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಈ ವರ್ಗಗಳ ಜನರಿಗೆ ಮೀಸಲಾತಿ ನಿಯಮ ರೂಪಿಸಿ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ. ನನ್ನನ್ನು ದಲಿತ ವಿರೋಧಿ ಎಂದು ಬೊಬ್ಬೆ ಹೊಡೆಯುತ್ತಿರುವ ಪ್ರತಿಪಕ್ಷಗಳ ನಾಯಕರೇ, ಇಂತಹ ಕಾರ್ಯಕ್ರಮ ಬಿಜೆಪಿ ಅಧಿಕಾರದಲ್ಲಿರುವ ದೇಶದ ಯಾವುದಾದರೂ ಒಂದು ರಾಜ್ಯದಲ್ಲಿ ಇದೆಯಾ? ಕೇಂದ್ರದಲ್ಲಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನವನ್ನು ಈ ಹಿಂದಿನ ಎಲ್ಲಾ ಸರ್ಕಾರಗಳೂ ಸುಮಾರು 25 ಕ್ಕೂ ಹೆಚ್ಚು ಸಾಮಾಜಿಕ ಸಾಮಾನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಂಡಿವೆ. ಹಿಂದಿನ ಸರ್ಕಾರವು ಈ ಯೋಜನೆಯ ನಿಯಮ 7ಡಿ ಅನ್ನು ದುರ್ಬಳಕೆ ಮಾಡಿಕೊಂಡ ಕಾರಣಕ್ಕೆ ನಾನು ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಕಾಯ್ದೆಗೆ ತಿದ್ದುಪಡಿ ತಂದು 7ಡಿ ಅನ್ನು ಕೂಡ ಕೈಬಿಡಲಾಗಿದೆ. ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನವನ್ನು ಎಸ್.ಸಿ / ಎಸ್.ಟಿ ಸಮುದಾಯದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲಾಗುತ್ತಿದೆಯೇ ವಿನಃ ಒಂದು ರೂಪಾಯಿ ಕೂಡ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿಲ್ಲ. ಸಾಮಾಜಿಕ ನ್ಯಾಯದಲ್ಲಿ ನನಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವ ಪ್ರತಿಪಕ್ಷಗಳ ನಾಯಕರು ತಾಕತ್ತಿದ್ದರೆ ಕೇಂದ್ರದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಿ ಎಂದು ಸವಾಲು ಹಾಕಿದ್ದಾರೆ.