ಬೆಂಗಳೂರು : ಮೈಸೂರು ಚಾಮರಾಜನಗರ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಹೆಚ್ಚಿದ್ದು, ಜನರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ, ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ದಂಧೆ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜನರನ್ನು ಹೆದರಿಸಿ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ. ಕೇವಲ ಮೈಸೂರು ಮಾತ್ರವಲ್ಲ. ಎಲ್ಲೇ ಮಾಡಿದರೂ ಅದು ತಪ್ಪೇ. ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ವ್ಯವಹಾರಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇನ್ನು ಮುಡಾ ಹಗರಣದ ಬಗ್ಗೆ ಇಡಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, ಇಡಿಯವರ ಪತ್ರಿಕಾ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ಬಿಜೆಪಿಯವರು ಈ ಪತ್ರಿಕಾ ಪ್ರಕಟಣೆಯನ್ನು ಅನಗತ್ಯವಾಗಿ ಇಡಿಯವರ ಮೂಲಕ ಬಿಡುಗಡೆ ಮಾಡಿಸಿದ್ದಾರೆ ಎಂದರು.