ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆಗೊಂದು ಗ್ರಂಥಾಲಯ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಗ್ರಂಥಾಲಯದ ಫಲಕವನ್ನು ಅನಾವರಣಗೊಳಿಸಿದರು.
‘ಮನೆಗೊಂದು ಗ್ರಂಥಾಲಯ’ ಯೋಜನೆಯ ಪ್ರಮುಖ ಅಂಶಗಳು
ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ.
ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸಾಗಿದೆ.
– ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಗ್ರಂಥಾಲಯ ಸ್ಥಾಪನೆ
– ಮನೆಯ ಮಾಲೀಕರು 100 ಪುಸ್ತಗಳಿಂದ ಆರಂಭಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಬೇಕು.
– ಪುಸ್ತಕಗಳ ಖರೀದಿ ಹಾಗೂ ಅವುಗಳನ್ನು ಸುಸಜ್ಜಿತವಾಗಿ ಇಡುವ ಜವಾಬ್ದಾರಿ ಮನೆಯ ಮಾಲೀಕರದ್ದಾಗಿರುತ್ತದೆ.
– ಸದರಿ ಗ್ರಂಥಾಲಯವನ್ನು ಗಣ್ಯರಿಂದ/ ವಿದ್ವಾಂಸರುಗಳಿಂದ / ಕಲಾವಿದರುಗಳಿಂದ ಉದ್ಘಾಟನೆಯನ್ನು ಮಾಡಿಸುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ.
– ಪ್ರಚಾರದ ಜವಾಬ್ದಾರಿಯನ್ನು ಪ್ರಾಧಿಕಾರವೇ ವಹಿಸಲಿದೆ
– ತಾಲ್ಲೂಕು / ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಜಾಗೃತ ಸಮಿತಿ ರಚನೆಯನ್ನು ಮಾಡಲಾಗುತ್ತದೆ.
– ಗ್ರಂಥಾಲಯ ಸ್ಥಾಪಿಸಲು ಪ್ರೋತ್ಸಾಹ ನೀಡುವುದು, ಅದರ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳುವುದು ಸಮಿತಿಯ ಜವಾಬ್ದಾರಿಯಾಗಿರುತ್ತದೆ.
ಆಡು ಭಾಷೆಯಲ್ಲಿ ಮಹಾಕಾವ್ಯ ಕಟ್ಟಿಕೊಟ್ಟ ಹಿರಿಮೆ ಗದುಗಿನ ನಾರಾಣಪ್ಪ ಅವರದ್ದು. ಕುಮಾರವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಾಣಪ್ಪ ರಚಿಸಿದ ʼಕರ್ಣಾಟ ಭಾರತ ಕಥಾಮಂಜರಿ’ ಕುಮಾರವ್ಯಾಸ ಭಾರತ ಎಂದೇ ಪ್ರಖ್ಯಾತವಾಗಿದೆ.
ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸ ಭಾರತವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಕಳೆದ ವರ್ಷ ಗದಗಿನಲ್ಲಿ ಆಚರಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಘೋಷಿಸಿದ್ದರು. ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸ ಭಾರತದ ಕೃತಿಯ ಹಕ್ಕುಗಳನ್ನು ಪುಸ್ತಕ ಪ್ರಾಧಿಕಾರ ಪಡೆದುಕೊಂಡು ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಕುಮಾರವ್ಯಾಸ ಭಾರತವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳಿಗೆ ಒಟ್ಟು ರೂ.500 ಬೆಲೆ ನಿಗದಿಪಡಿಸಲಾಗಿದೆ.