ಬೆಂಗಳೂರು : ಮುಡಾ ಹಗರಣದಲ್ಲಿ ‘ಸಿಎಂ ಸಿದ್ದರಾಮಯ್ಯ ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಲೋಕಾಯುಕ್ತಕ್ಕೆ ‘ಪ್ರಮುಖ ದಾಖಲೆ’ಗಳನ್ನು ಸಲ್ಲಿಕೆ ಮಾಡಲಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಲ್ಲಿ ಕಾನೂನುಬಾಹಿರವಾಗಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವ ಮೂಲಕ ಸರ್ಕಾರಕ್ಕೆ 60 ಕೋಟಿ ರೂಪಾಯಿಗಳಷ್ಟು ವಂಚನೆ ಮಾಡಿರುವ “ಬದಲಿ ನಿವೇಶನಗಳ ಹಂಚಿಕೆ” ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 400 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ ದಿನಾಂಕ 20/07/2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬಸ್ಥರು ಹಾಗೂ ಕೆಲವು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಕಛೇರಿಯಲ್ಲಿ ದೂರನ್ನು ನೀಡಲಾಗಿರುತ್ತದೆ.
ಅದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳು ಈಗ ನಮಗೆ ದೊರೆತಿದ್ದು, ಅವುಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. 1997-98 ರ ಅವಧಿಯಲ್ಲಿ L & T ಸಂಸ್ಥೆಯ ಮೂಲಕ MUDA ವು ಸಂಪೂರ್ಣ ಅಭಿವೃದ್ಧಿ ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಪಡಿಸಿ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿ ದೀಪಗಳನ್ನು ಒಳಗೊಂಡ ‘ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು ಹಾಗೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸದರಿ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆ ಎತ್ತಿದ್ದವು.
ಆದರೆ, ಆದಾಗಲೇ ಅಭಿವೃದ್ಧಿಗೊಂಡಿದ್ದ ಸದರಿ ಬಡಾವಣೆಯಲ್ಲಿ 3.16 ಎಕರೆ ವಿಸ್ತೀರ್ಣದ ಪ್ರದೇಶವನ್ನು “ಭೂ ಪರಿವರ್ತನೆ” ಮಾಡಿ ಕೊಡುವಂತೆ ದಿನಾಂಕ 01/12/2004 ರಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಅಂದಿನ ಜಿಲ್ಲಾಧಿಕಾರಿಗಳು ತಾಲ್ಲೂಕು ತಹಶೀಲ್ದಾರರ ವರದಿಯನ್ನಾಧರಿಸಿ (???) ದಿನಾಂಕ 17/06/2005 ರಂದು ಖುದ್ದು ಸ್ಥಳ ಪರಿಶೀಲನೆ ಮಾಡಿ “ಮೈಸೂರು ತಾಲ್ಲೂಕು, ಕಸಬಾ ಹೋಬಳಿ, ಕೆಸರೆ ಗ್ರಾಮದ ಸರ್ವೆ ನಂ: 464 ರ 3.16 ಎಕರೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಭೂ ಪರಿವರ್ತನೆ ಮಾಡಲು ಅನುಮತಿ ನೀಡಲಾಗಿದೆ’ ಎಂದು “ಸ್ಥಳ ತನಿಖಾ ಟಿಪ್ಪಣಿ”ಯಲ್ಲಿ ಲಿಖಿತವಾಗಿ ತಿಳಿಸಿಸಲಾಗಿದೆ.