ಬೆಳಗಾವಿ : ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಮತ್ತು ಗೊಂದಲ ಬಗೆಹರಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಳಗಾವಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ವಕ್ಫ್ ಮಂಡಳಿ ಆಸ್ತಿ ಕುರಿತು ಎದ್ದಿರುವ ವಿವಾದ ಬಗೆಹರಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ದೇವಸ್ಥಾನ, ಹಿಂದೂ ರುದ್ರ ಭೂಮಿಗಳ ಕುರಿತು ಪರಿಶೀಲಿಸಿ ವರದಿ ನೀಡಲಿದೆ ಎಂದು ತಿಳಿಸಿದ್ದಾರೆ.
ಇನ್ನೂ ಇನಾಂ ರದ್ದತಿ ಕಾಯ್ದೆ, ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರಾದ ಭೂಮಿ ಇದ್ದರೆ, ದೇವಾಲಯ, ರುದ್ರ ಭೂಮಿ, ಸರ್ಕಾರಿ ಶಾಲೆಗಳು ವಕ್ಪ್ ಆಸ್ತಿಯಲ್ಲಿದ್ದರೆ ಅದನ್ನು ತೆರವು ಮಾಡದೆ ಪಹಣಿಯಲ್ಲಿ ನಮೂದಾಗಿರುವ ವಕ್ಫ್ ಅನ್ನು ತೆಗೆದು ಖಾತೆ ಮಾಡಿಕೊಡಲಾಗುವುದು. ಮಸೀದಿ, ಮದರಸಾ, ದರ್ಗಾ, ಈದ್ಗಾ ಮೈದಾನ, ಖಬರಸ್ಥಾನದ ಭೂಮಿಗಳನ್ನು ಮಾತ್ರ ವಕ್ಪ್ ಗೆ ಸೇರ್ಪಡೆ ಮಾಡಲಾಗುವುದು. ಸರ್ಕಾರ ನಿರ್ಧರಿಸಿದ ಅಂಶಗಳನ್ನು ಹೊರತುಪಡಿಸಿ ಉಳಿದ ಅಕ್ರಮ ಒತ್ತುವರಿ ತೆರವು ಮಾಡಲಾಗುವುದು ಎಂದು ಹೇಳಿದ್ದಾರೆ.