ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದ ಸ್ವಯಂ ಪ್ರೇರಣೆಯಿಂದ ತನಿಖೆ ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯವು, ಪ್ರಕರಣದಲ್ಲಿ ಮಾಜಿ ಸಚಿವರಾದ ನಾಗೇಂದ್ರ ಅವರ ಹೆಸರನ್ನು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿಗೆ ಸರ್ಕಾರದ ವಿರುದ್ದ ಸುಳ್ಳು ಆರೋಪಗಳನ್ನು ಸೃಷ್ಟಿಸುವುದು, ನಂತರ ತಮ್ಮ ಜೀತದಾಳುಗಳಂತಿರುವ ಸಿಬಿಐ, ಇಡಿ ಮೊದಲಾದ ತನಿಖಾ ಸಂಸ್ಥೆಗಳಿಂದ ತನಿಖೆ ಮಾಡಿಸಿ ನಿರಪರಾಧಿಗಳನ್ನು ಅಪರಾಧಿಗಳೆಂದು ಬಿಂಬಿಸಿ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವುದು, ಈ ಮೂಲಕ ಸುಭದ್ರ ಸರ್ಕಾರವನ್ನು ಅಸ್ಥಿರಗೊಳಿಸುವುದು ಕೇಂದ್ರದ ಬಿಜೆಪಿ ಸರ್ಕಾರ ದೇಶದ ವಿವಿಧ ರಾಜ್ಯಗಳಲ್ಲಿ ಮಾಡಿರುವ ಷಡ್ಯಂತ್ರ. ಅದನ್ನೇ ಇಲ್ಲಿಯೂ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ಅಮಿತ್ ಶಾ ಅವರೇ, ನೀವು ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಡೆಸುತ್ತಿರುವ ಸೇಡಿನ ರಾಜಕಾರಣವನ್ನು ನಮ್ಮ ಜನ ಗಮನಿಸುತ್ತಿದ್ದಾರೆ.
ಈ ದುಷ್ಕೃತ್ಯಗಳ ಸರಣಿ ಮುಂದುವರಿದರೆ ಜನತೆಯೇ ನಿಮ್ಮ ವಿರುದ್ಧ ಬಂಡೆದ್ದು ಪಾಠ ಕಲಿಸಲು ಸಿದ್ಧರಾಗಬಹುದು. ಬೇರೆ ರಾಜ್ಯಗಳಲ್ಲಿ ಆಡಿದ ಈ ಕಳ್ಳಾಟವನ್ನು ಕರ್ನಾಟಕದಲ್ಲಿ ಆಡಲು ಮುಂದಾಗಬೇಡಿ.
ಕನ್ನಡಿಗರು ಸಹನೆ, ಸೌಹಾರ್ದತೆಗೆ ಹೆಸರಾದವರಷ್ಟೆ ಅಲ್ಲ, ಅನ್ಯಾಯ, ಮೋಸವನ್ನು ಸಹಿಸದವರು, ಸತ್ಯ ಮತ್ತು ನ್ಯಾಯದ ಪರವಾಗಿ ಹೋರಾಡಬಲ್ಲ ಛಾತಿ ಉಳ್ಳವರು ಕೂಡಾ ಆಗಿದ್ದಾರೆ ಎನ್ನುವುದು ನೆನಪಿರಲಿ ಎಂದು ಹೇಳಿದ್ದಾರೆ.