ಬೆಂಗಳೂರು : ನಮ್ಮದು ಹಳ್ಳಿಗಳ ಮತ್ತು ರೈತರ ದೇಶ. ಗ್ರಾಮಗಳು ಮತ್ತು ರೈತರು ನೆಮ್ಮದಿಯಾಗಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೇ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು, ಪೋಡಿ ಮುಕ್ತ ಗ್ರಾಮಗಳಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೋಡಿ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಪೂರಕವಾಗಿ 227 ಪರವಾನಿಗೆ ಭೂಮಾಪಕರನ್ನು ಕಾಯಂ ಮಾಡಲಾಗುವುದು. ಸರ್ವೆ ಇಲಾಖೆಯಲ್ಲಿ ಖಾಲಿ ಇರುವ 36 ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗುವುದು ಎಂದು ಘೋಷಿಸಿದ್ದಾರೆ.
ಪೋಡಿ ಮುಕ್ತ ಅಭಿಯಾನ ನಡೆಸಿದರೂ ಇನ್ನು ಅನೇಕ ಗ್ರಾಮಗಳಲ್ಲಿ ಪೋಡಿ ಸಮಸ್ಯೆ ನಿವಾರಣೆಯಾಗಿಲ್ಲ. ಹೀಗಾಗಿ ಸರ್ವೆ ಕಾರ್ಯ ಪೂರ್ಣಗೊಳಿಸಿ ದಾಖಲೆಗಳನ್ನು ಸರಿಪಡಿಸಿ ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕೆರೆಗಳ ಒತ್ತುವರಿ ಪತ್ತೆ ಮಾಡಲು ರಾಜ್ಯ ಎಲ್ಲಾ ಕೆರೆಗಳ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಇದಕ್ಕಾಗಿ ಸರ್ವೇ ಇಲಾಖೆ ಸೂಕ್ತ ರೀತಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕಂದಾಯ ಇಲಾಖೆಗೆ ಅಗತ್ಯ ಇರುವಷ್ಟು ಹಣ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ಅಗತ್ಯ ಸಿಬ್ಬಂದಿ ಬಲವನ್ನೂ ಕೊಟ್ಟಿದ್ದೇವೆ. ಅಗತ್ಯ ಇದ್ದರೆ ಮತ್ತೂ ಕೊಡುತ್ತೇನೆ. ಖಾಲಿ ಇರುವ ಎಲ್ಲಾ ಸರ್ವೇಯರ್ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕವಾಗಿ ಆಗಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ. ಹಿಂದೆ ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿರುವ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೇಯರ್ ಗಳ ನೇಮಕಾತಿ ಮಾಡಿದ್ದಾರೆ. ಪರವಾನಗಿ ಭೂಮಾಪಕರ ಕಾಯಂ ಮಾಡಲು ಗಂಭೀರ ಚಿಂತನೆ ಮಾಡಲಾಗುವುದು. ಜೊತೆಗೆ 36 ಮಂದಿ ಎಡಿಎಲ್ ಆರ್ ಗಳ ನೇಮಕವನ್ನೂ ಸದ್ಯದಲ್ಲೇ ಮಾಡಲಾಗುವುದು ಎಂದು ತಿಳಿಸಿದ್ದಾರೆ.