ಬೆಂಗಳೂರು : ಬೆಂಗಳೂರು : ವೃತ್ತಿಪರ ಪದವಿ ಕೋರ್ಸ್ ಪ್ರವೇಶಕ್ಕೆ ಏಪ್ರಿಲ್ 16, 17 ರಂದು ರಾಜ್ಯದ 775 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿದ್ದು, ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ನಡೆಸಲಾಗುತ್ತದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಇದೇ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಯಾವುದೇ ಪರೀಕ್ಷಾ ಅವ್ಯವಹಾರ ನಡೆಯದಂತೆ ಸೂಕ್ಷ್ಮವಾಗಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಏಪ್ರಿಲ್ 16ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ ಹಾಗೂ ಏಪ್ರಿಲ್ 17ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 11.50 ರವರೆಗೆ ಗಣಿತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷಾ ಪ್ರಾರಂಭವಾಗುವುದಕ್ಕಿಂತ ಒಂದು ಗಂಟೆ ಮೊದಲು ಹಾಗೂ ಪರೀಕ್ಷಾ ನಂತರ 30 ನಿಮಿಷಗಳು ಪೊಲೀಸ್ ಬಂದೋಬಸ್ತಿನ ಅವಶ್ಯಕತೆ ಇರುತ್ತದೆ. ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಕೊಂಡ್ಯೊಯುವ ಮತ್ತು ವಿತರಣೆ ಮಾಡುವ ಸಮಯಕ್ಕೆ ಪ್ರತಿ ತಾಲ್ಲೂಕಿನ ಮಾರ್ಗಾಧಿಕಾರಿಗಳ ಜೊತೆಗೆ ಪೊಲೀಸ್ ರಕ್ಷಣೆ ಬೇಕಾಗಿರುತ್ತದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಜಿಲ್ಲಾಧಿಕಾರಿಗಳಿಂದ ಘೋಷಿಸುವುದು.
ವಿಜ್ಞಾನ ವಿಷಯವನ್ನು ಬೋಧಿಸುವ ಉಪನ್ಯಾಸಕರು, ಶಿಕ್ಷಕರು ಹಾಗೂ ಸಂಬಂಧಿಕರ, ಸ್ವಂತ ಮಕ್ಕಳು ಈ ಪರೀಕ್ಷೆಗೆ ಹಾಜರಾಗುತ್ತಿದ್ದರೆ ಅಂತಹ ಉಪನ್ಯಾಸಕರು, ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನಿಯೋಜಿಸುವಂತೆ ಇಲ್ಲ. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಫೋನುಗಳನ್ನು ತರುವುದು ಹಾಗೂ ಕೈ ಗಡಿಯಾರವನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಉಪನ್ಯಾಸಕರು, ಕಚೇರಿ ಸಿಬ್ಬಂದಿಯವರು ಪರೀಕ್ಷೆ ನಡೆಯುವ ಅವಧಿಯಲ್ಲಿ ಮೊಬೈಲ್ ಫೋನುಗಳನ್ನು ತರುವುದುನ್ನು ಹಾಗೂ ಕೈ ಗಡಿಯಾರ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಮುಖ್ಯ ಅಧೀಕ್ಷಕರು ಬೇಸಿಕ್ ಸೆಟ್ ಉಪಯೋಗಿಸಲು ಅವಕಾಶ ನೀಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತೆರೆಯುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡುವಾಗ ಸಿಸಿಟಿವಿ ವೀಕ್ಷಣೆಯಡಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಎಲ್ಲ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕೆಸಿಇಟಿ ಡ್ರೆಸ್ ಕೋಡ್ 2025:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತ ಅಧಿಸೂಚನೆಯಲ್ಲಿ ಕೆಸಿಇಟಿ ಡ್ರೆಸ್ ಕೋಡ್ ಅನ್ನು ಉಲ್ಲೇಖಿಸಿಲ್ಲ. ಆದಾಗ್ಯೂ, ಅಭ್ಯರ್ಥಿಗಳು ದೊಡ್ಡ ಗುಂಡಿಗಳು, ಉಂಗುರಗಳು, ಕಿವಿಯೋಲೆಗಳು, ದಪ್ಪ ಅಂಗಾಲುಗಳನ್ನು ಹೊಂದಿರುವ ಬೂಟುಗಳು ಮತ್ತು ಇತರ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಲು ಸೂಚಿಸಲಾಗಿದೆ. ಡ್ರೆಸ್ ಕೋಡ್ ಜೊತೆಗೆ, ಅರ್ಜಿದಾರರು ಕೆಸಿಇಟಿ ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ನಿರ್ಬಂಧಿತ ವಸ್ತುವನ್ನು ಒಯ್ಯದಂತೆ ಸೂಚಿಸಲಾಗಿದೆ. ಕ್ಯಾಲ್ಕುಲೇಟರ್, ವಾಚ್, ವ್ಯಾಲೆಟ್ ಅಥವಾ ಇತರ ಯಾವುದೇ ನಿರ್ಬಂಧಿತ ವಸ್ತುವನ್ನು ಹೊಂದಿರುವ ಯಾವುದೇ ಅಭ್ಯರ್ಥಿಗಳಿಗೆ ಕೆಸಿಇಟಿ 2025 ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ.
ಮಹಿಳಾ ಅಭ್ಯರ್ಥಿಗಳು
ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್ಗಳು ಅಥವಾ ಬಟನ್ಗಳನ್ನು ಹೊಂದಿರುವ ಬಟ್ಟೆಗಳ ಧರಿಸುವುದು ನಿಷಿದ್ದ, ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಮತ್ತು ವಸ್ತ್ರ ಸಂಹಿತೆಯಂತೆ ಬಟ್ಟೆ ಧರಿಸಬೇಕು. ಹೀಲ್ಡ್ ಚಪ್ಪಲಿ, ಶೂಗಳನ್ನು ಧರಿಸಬಾರದು, ತೆಳುವಾದ ಅಡಿಪಾಯವಿರುವ ಚಪ್ಪಲಿ ಧರಿಸಬೇಕು. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಲೋಹದ ಆಭರಣ ಧರಿಸುವಂತಿಲ್ಲ.
ಎಲೆಕ್ಟ್ರಾನಿಕ್ಸ್ ವಸ್ತುಗಳ ನಿಷೇಧ :
ಡ್ರೆಸ್ ಕೋಡ್ ಜೊತೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂಥ್, ಕೈ ಗಡಿಯಾರಗಳನ್ನು ಕೊಠಡಿಗೆ ತರುವಂತಿಲ್ಲ. ತಿನ್ನಬಹುದಾದ ವಸ್ತುಗಳನ್ನು ತರುವಂತಿಲ್ಲ, ಬಣ್ಣದ ಹಾಗೂ ಲೋಹದ ಕುಡಿಯುವ ನೀರಿನ ಬಾಟಲಿಗೂ ಅನುಮತಿ ಇಲ್ಲ, ಕೇಂದ್ರದಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.
ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ ಧರಿಸುವಂತಿಲ್ಲ ಹಾಗೂ ಮುಖ ಮುಚ್ಚುವಂತೆ ಮಾಸ್ಕ್ ಧರಿಸುವಂತಿಲ್ಲ.
ಅನುಮತಿಸಲಾದ ವಸ್ತುಗಳು
ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷಾ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.
ಪರೀಕ್ಷಾ ಕೇಂದ್ರ ಪ್ರವೇಶ ಅವಧಿ:
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಕನಿಷ್ಠ ಮೊದಲ ಬೆಲ್ ಆಗುವ 2 ಗಂಟೆ ಮುಂಚಿತವಾಗಿ ಹಾಜರಿರಬೇಕು. ಕೇಂದ್ರದಲ್ಲಿ ಕೊಠಡಿ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳ ಮುಖವನ್ನಾಧರಿಸಿ ಆಫ್ ಮೂಲಕ ಗುರುತು ಪತ್ತೆ ಮಾಡುವ ಕಾರ್ಯ ನಡೆಯಲಿದೆ. ಮತ್ತು ಎಲ್ಲಾ ಅಭ್ಯರ್ಥಿಗಳ ಸಂಪೂರ್ಣ ತಪಾಸಣೆ ನಡೆಯುವುದರಿಂದ ಮೊದಲ ಬೆಲ್ ಆಗುವ ಮುನ್ನ 2 ಗಂಟೆಗಳ ಕಾಲ ಮುಂಚಿತವಾಗಿ ಕೇಂದ್ರದಲ್ಲಿರಬೇಕು. ಬೆಳಗ್ಗೆ 10.20 ಕ್ಕೆ ಮತ್ತು ಮಧ್ಯಾಹ್ನ 2.20 ಕ್ಕೆ ಮೊದಲ ಬೆಲ್ ಆಗಲಿದೆ.ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಕೇಂದ್ರಗಳ ಪ್ರಾಂಶುಪಾಲರು ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.