ನವದೆಹಲಿ : ಸಂಸತ್ತು ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಮಸೂದೆ 2024 ಅನ್ನು ಅಂಗೀಕರಿಸಿದ್ದು, ರಾಜ್ಯಸಭೆ ಇದನ್ನು ಅನುಮೋದಿಸಿದೆ. ಈ ಮೂಲಕ ಪ್ರತಿ ಬ್ಯಾಂಕ್ ಖಾತೆಗೆ ನಾಮನಿರ್ದೇಶಿತರ ಆಯ್ಕೆಯನ್ನು ಅಸ್ತಿತ್ವದಲ್ಲಿರುವ ಒಂದರಿಂದ ನಾಲ್ಕಕ್ಕೆ ಹೆಚ್ಚಿಸಲು ಮಸೂದೆಯು ಅವಕಾಶ ನೀಡಲಿದೆ.
ಲೋಕಸಭೆ ಈಗಾಗಲೇ ಮಸೂದೆಯನ್ನು ಅಂಗೀಕರಿಸಿದೆ. ಈ ಮಸೂದೆಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ 1955, ಬ್ಯಾಂಕಿಂಗ್ ಕಂಪನಿಗಳು(ಸ್ವಾಧೀನ ಮತ್ತು ಅಂಡರ್‌ಟೇಕಿಂಗ್‌ಗಳ ವರ್ಗಾವಣೆ) ಕಾಯ್ದೆ 1970 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ಅಂಡರ್‌ಟೇಕಿಂಗ್ ವರ್ಗಾವಣೆ) ಕಾಯ್ದೆ 1980 ಅನ್ನು ತಿದ್ದುಪಡಿ ಮಾಡಲಾಗಿದೆ.
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ಬ್ಯಾಂಕಿಂಗ್ ವಲಯವನ್ನು ಬಲಪಡಿಸಲು ಸರ್ಕಾರ ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಕಳೆದ ವರ್ಷ ಸಾರ್ವಜನಿಕ ವಲಯದ ಬ್ಯಾಂಕುಗಳು 1.41 ಲಕ್ಷ ಕೋಟಿ ರೂಪಾಯಿಗಳ ಅತ್ಯಧಿಕ ನಿವ್ವಳ ಲಾಭವನ್ನು ದಾಖಲಿಸಿವೆ. ಸರ್ಕಾರವು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸಿ ಬ್ಯಾಂಕಿಂಗ್ ಅನ್ನು ಕೊನೆಯ ನಾಗರಿಕನ ಬಳಿಗೆ ಕೊಂಡೊಯ್ದಿದೆ ಮತ್ತು ನಾಗರಿಕ ಕೇಂದ್ರಿತ ಬ್ಯಾಂಕಿಂಗ್ ಸೇವೆಗಳನ್ನು ಖಚಿತಪಡಿಸಿದೆ. ಇಲ್ಲಿಯವರೆಗೆ 55 ಕೋಟಿಗೂ ಹೆಚ್ಚು ಜನ-ಧನ್ ಖಾತೆಗಳನ್ನು ತೆರೆಯಲಾಗಿದೆ ಮತ್ತು ಅವುಗಳಲ್ಲಿ ಶೇಕಡಾ 55 ಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರದ್ದಾಗಿವೆ ಎಂದು ಹೇಳಿದ್ದಾರೆ.