ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹೆಣ್ಣು ಮಕ್ಕಳಿಗೆ ಶೇಕಡ 50ರಷ್ಟು ಸೀಟುಗಳನ್ನು ಮೀಸಲಿಡುವುದು ಕಡ್ಡಾಯ ಎಂದು ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2025- 26ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಸುತ್ತೋಲೆ ಹೊರಟಿಸಿದ್ದಾರೆ. ರಾಜ್ಯ ಪಠ್ಯಕ್ರಮ, CBSE, ICS ಸೇರಿ ಸಹ ಶಿಕ್ಷಣ ಹೊಂದಿರುವ ರಾಜ್ಯದ ಎಲ್ಲಾ ಮಾದರಿ ಖಾಸಗಿ ಶಾಲೆಗಳಲ್ಲಿಯೂ ಶೇಕಡ 50ರಷ್ಟು ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಶಾಲಾ ಪ್ರವೇಶಕ್ಕೆ ವಿದ್ಯಾರ್ಥಿ ಹಾಗೂ ಪೋಷಕರ ಪರೀಕ್ಷೆ ಸಂದರ್ಶನ ನಡೆಸುವುದು ಕಾನೂನುಬಾಹಿರವಾಗಿದೆ. ಶುಲ್ಕ ಮಾಹಿತಿ ಕುರಿತು ನೋಟಿಸ್ ಬೋರ್ಡ್, ವೆಬ್, ಎಸ್.ಎ.ಟಿ.ಎಸ್. ತಂತ್ರಾಂಶದಲ್ಲಿ ಪ್ರಕಟಿಸಬೇಕು. ಪ್ರವೇಶ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ಸೀಟುಗಳ ವಿವರ, ಪ್ರವೇಶ, ವೇಳಾಪಟ್ಟಿ ಪ್ರಕಟಿಸಬೇಕು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ಎಲ್ಲಾ ಖಾಸಗಿ ಶಾಲೆಗಳು ಎಲ್ ಕೆಜಿ, ಯುಕೆಜಿ, ಒಂದನೇ ತರಗತಿಯಿಂದ 10 ನೇ ತರಗತಿವರೆಗೆ ಪ್ರವೇಶ ನೀಡುವಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ತರಗತಿಗಳಲ್ಲಿಯೂ ಲಭ್ಯವಿರುವ ಸೀಟುಗಳಲ್ಲಿ ಶೇ. 50 ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಿಡಬೇಕು. ಒಂದು ವೇಳೆ ನಿರೀಕ್ಷಿತ ಅರ್ಜಿಗಳು ಲಭ್ಯವಿಲ್ಲದೆ ಇದ್ದಾಗ ಉಳಿಕೆ ಸೀಟುಗಳನ್ನು ಬಾಲಕರಿಗೆ ನೀಡಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ.