ಬೆಂಗಳೂರು : ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಶಾಸಕರ ಜೊತೆ ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಸಭೆ ಕರೆದಿದ್ದಾರೆ.ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಶಾಸಕರ ಜೊತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಾತಿ ಗಣತಿ ವರದಿಯನ್ನು ಸಂಪೂರ್ಣವಾಗಿ ನೋಡಿಲ್ಲ, ಅದರ ಅಧ್ಯಯನ ಮಾಡಲಾಗುತ್ತಿದೆ. ಮಂಗಳವಾರ ಕಾಂಗ್ರೆಸ್ ಪಕ್ಷದ ನಮ್ಮ ಸಮುದಾಯದ ಶಾಸಕರ ಸಭೆ ಕರೆದಿದ್ದೇನೆ. ಅವರ ಜೊತೆ ಚರ್ಚೆ ಮಾಡಿ, ಯಾರ ಮನಸ್ಸಿಗೂ ನೋಯಿಸದೇ ಎಲ್ಲರ ಗೌರವ ಕಾಪಾಡಲು ಸಲಹೆ ನೀಡುತ್ತೇವೆ ಎಂದರು.
ಜಾತಿ ಗಣತಿ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ಕುರಿತು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಆದರೆ ಸರ್ಕಾರ ಮಾತ್ರ ಜಾತಿ ಗಣತಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಜೊತೆಗೆ ಜಾತಿ ಗಣತಿ ಕುರಿತು ಚರ್ಚಿಸಲು ಏ 17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆದಿದೆ. ಈ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ಕುರಿತು ತೀರ್ಮಾನಿಸಲಿದೆ ಎನ್ನಲಾಗುತ್ತಿದೆ.