ಬೆಂಗಳೂರು : ರಾಜ್ಯದ ಡಿಸಿಆರ್‌ಇ ಪೊಲೀಸ್ ಠಾಣೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಮತ್ತು ತನಿಖೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ (1)ರ ಅಧಿಸೂಚನೆಯಲ್ಲಿ ರಾಜ್ಯಾದ್ಯಂತ ಒಟ್ಟು 33 ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಸದರಿ ಅಧಸೂಚನೆಯಲ್ಲಿ ನಮೂದಿಸಿರುವ ಕಾಯಿದೆಗಳಡಿ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಮುಂದಿನ ತನಿಖೆಗಾಗಿ ಡಿ.ಸಿ.ಆರ್.ಇ ಪೊಲೀಸ್ ಠಾಣೆಗಳಿಗೆ ಉಲ್ಲೇಖಿತ (2)ರ ಸರ್ಕಾರದ ಆದೇಶದಲ್ಲಿ ನೀಡಿರುವ ಮಾರ್ಗಸೂಚಿಗಳನ್ವಯ ವರ್ಗಾಯಿಸಲು ಸೂಚಿಸಲಾಗಿದೆ.
ಉಲ್ಲೇಖಿತ (2)ರ ಸರ್ಕಾರಿ ಆದೇಶದನ್ವಯ. ದಿನಾಂಕ:14.04.2025 ರಿಂದ ಅನ್ವಯವಾಗುವಂತೆ 33 ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಕಾರ್ಯಾಗತಗೊಳಿಸಲಾಗಿರುತ್ತದೆ. ಆದರೆ, ಸದರಿ ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ಠಾಣಾಧಿಕಾರಿಗಳ, ಇತರೆ ಅಧಿಕಾರಿ/ಸಿಬ್ಬಂದಿಗಳ ನಿಯೋಜನ ಮತ್ತು ಪೊಲೀಸ್ ಐಟಿ ತಂತ್ರಾಂಶ ಅಳವಡಿಕೆಯು ಪೂರ್ಣಗೊಂಡಿರುವುದಿಲ್ಲ. ಆದುದರಿಂದ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಪಡೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ.
ಪ್ರಸ್ತುತ 33 ಡಿಸಿಆರ್‌ಇ ಪೊಲೀಸ್ ಠಾಣೆಗಳ ಪೈಕಿ ಅನುಬಂಧ-1 ರಲ್ಲಿ ನಮೂದಿಸಿರುವ 15 ಡಿಸಿಆರ್‌ಇ ಠಾಣೆಗಳಲ್ಲಿ ಮೂಲಭೂತ ಸಿದ್ಧತೆಗಳು ಪೂರ್ಣಗೊಂಡಿರುತ್ತದೆ. ಆದ್ದರಿಂದ ದಿನಾಂಕ:12.06.2025 ರಿಂದ ಅನ್ವಯವಾಗುವಂತೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಧಿಸೂಚಿತ ಕಾಯಿದೆಗಳಡಿ ದಾಖಲಾಗುವ ಪ್ರಕರಣಗಳನ್ನು ಡಿಸಿಆರ್‌ಇ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲು ಸೂಚಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಉಲ್ಲೇಖಿತ (1)ರ ಅಧಿಸೂಚನೆಯನ್ವಯ ದಾಖಲಾಗುವ ಪ್ರಕರಣಗಳಲ್ಲಿ ಈ ಕೆಳಕಂಡ ಪರಿಶೀಲನಾ ಪಟ್ಟಿಯಲ್ಲಿ ನಮೂದಿಸಿರುವ ಅಂಶಗಳನ್ನು ತನಿಖಾಧಿಕಾರಿಯವರು ಭರ್ತಿ ಮಾಡಿ ತಮ್ಮ ವರದಿಯೊಂದಿಗೆ ಸಂಬಂಧಪಟ್ಟ ಡಿಸಿಆರ್‌ಇ ಪೊಲೀಸ್ ಠಾಣೆಗೆ ಮುಂದಿನ ತನಿಖೆಗಾಗಿ ವರ್ಗಾಯಿಸತಕ್ಕದ್ದು ಮತ್ತು ಈ ಮಾಹಿತಿಯನ್ನು ತಮ್ಮ ಘಟಕಾಧಿಕಾರಿಯವರಿಗೆ ಸಮುಚಿತ ಮಾರ್ಗದಲ್ಲಿ ಸಲ್ಲಿಸತಕ್ಕದ್ದು.