ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ ನೀಡಲಾಗಿದೆ.
ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ವರ್ಷಕ್ಕಿಂತ ಹಿಂದಿನ ಸಾವಿನ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದ ಮೂಲಕವೇ ಮರಣ ಪ್ರಮಾಣ ಪತ್ರ ಪಡೆಯಬೇಕು ಎನ್ನುವ ಷರತ್ತು ರದ್ದುಗೊಳಿಸುವ ಜನನ ಮತ್ತು ಮರಣ ತಿದ್ದುಪಡಿ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಮರಣ ಪ್ರಮಾಣ ಪತ್ರದಲ್ಲಿ ಲಭ್ಯವಿದ್ದಲ್ಲಿ ಕಾಯಿಲೆಯ ಅಥವಾ ಆಸ್ಪತ್ರೆಯ ಹಿನ್ನೆಲೆಯನ್ನು ದಾಖಲಿಸಿ ಡಿಜಿಟಲ್ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೀಗಿವೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು.
* ಕರ್ನಾಟಕ ಜನನ ಮರಣಗಳ ನೋಂದಣಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ
* ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಸಮಾಜ ಕಲ್ಯಾಣ ಭವನವನ್ನು ₹40 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ
* ವಸತಿ ಶಾಲೆ / ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಮತ್ತು KREIS ವಸತಿ ಶಾಲೆ / ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ₹32.95 ಕೋಟಿ ವೆಚ್ಚದಲ್ಲಿ ಶೇಂಗಾ ಚಿಕ್ಕಿ ಮತ್ತು ಪೌಷ್ಠಿಕಾಂಶದ ಪುಡಿಯನ್ನು ಖರೀದಿಸಿ, ಒದಗಿಸಲು ತೀರ್ಮಾನ
* ಹೊಸಕೋಟೆ ತಾಲೂಕಿನ ರಸ್ತೆ ಅಭಿವೃದ್ಧಿಗೆ ₹54.25 ಕೋಟಿ ಮೊತ್ತವನ್ನು ರಾಜ್ಯ ಸರ್ಕಾರದ ವತಿಯಿಂದ ಭರಿಸಲು ತೀರ್ಮಾನ
* ಅಲ್ಪಸಂಖ್ಯಾತ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳಿಗೆ ಕಡ್ಡಾಯ ಪ್ರವೇಶಕ್ಕೆ ರಿಯಾಯಿತಿ ಒದಗಿಸುವ ಪ್ರಸ್ತಾವನೆಗೆ ಸಮ್ಮತಿ
* ₹694 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯ 389.68 ಕಿ.ಮೀ. ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ತೀರ್ಮಾನ
* ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2024ಕ್ಕೆ ಅನುಮೋದನೆ
* ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ₹19.70 ಕೋಟಿ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಲು ಒಪ್ಪಿಗೆ
* ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ 2024ಕ್ಕೆ ಅನುಮೋದನೆ
* ₹2,500 ಕೋಟಿ ವೆಚ್ಚದಲ್ಲಿ ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ತೀರ್ಮಾನ
* ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ವಸತಿ ಶಾಲೆಗಳು ಹಾಗೂ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟಿಕ್ ಹೀಟ್ ಪಂಪ್‌ಗಳನ್ನು ₹42 ಕೋಟಿ ವೆಚ್ಚದಲ್ಲಿ ಪೂರೈಸಲು ಆಡಳಿತಾತ್ಮಕ ಅನುಮೋದನೆ
* ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿಯಿಂದ ಯಡ್ರಾಮಿವರೆಗಿನ ರಸ್ತೆ ಕಾಮಗಾರಿಯನ್ನು ₹25 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ತೀರ್ಮಾನ
* ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯನ್ನು ₹97 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ
* ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಿ, ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಎಂದು ಮರುನಾಮಕರಣ ಮಾಡಲು ಒಪ್ಪಿಗೆ
* ಮಂಗಳೂರು – ಚೇರ್ವತ್ತೂರು – ಕರಾವಳಿ ಜಿಲ್ಲಾ ಮುಖ್ಯ ರಸ್ತೆಯ ನೇತ್ರಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು *200 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ
* *28,405 ಕೋಟಿ ವೆಚ್ಚದಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿಗೆ ಅನುಮೋದನೆ
* ಬೆಂಗಳೂರು ನಗರ ಜಿಲ್ಲೆಯ ಹುಸ್ಕೂರು ಗ್ರಾಮದಲ್ಲಿ ಕೆಟಿಪಿಪಿ ಕಾಯ್ದೆಯಡಿ ಬಹುಮಹಡಿ ವಸತಿ ಸಮುಚ್ಚಯ ಯೋಜನೆಯನ್ನು ಕೈಗೊಳ್ಳಲು ತೀರ್ಮಾನ
* ಎಸ್‌ಸಿ/ಎಸ್‌ಟಿ ಸಮುದಾಯದವರಿಗೆ ಅಪರೂಪದ ಮತ್ತು ಹೆಚ್ಚಿನ ವೆಚ್ಚದ ಕಾಯಿಲೆಗಳಿಗೆ ಗುಣಮಟ್ಟದ ಚಿಕಿತ್ಸೆಗಾಗಿ ₹47 ಕೋಟಿ ವ್ಯಯಿಸಲು ಒಪ್ಪಿಗೆ.