ಬೆಂಗಳೂರು: ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕ ಓಡಾಟಕ್ಕೆ ಬಳಕೆಯಾಗುವ ನಕ್ಷೆಯ ಕಾಲುದಾರಿ ಮತ್ತು ಬಂಡಿದಾರಿಗಳನ್ನು ಮುಚ್ಚುವುದು ಅಥವಾ ಅಡ್ಡಿಪಡಿಸುವುದು ಕಾನೂನುಬಾಹಿರ ಎಂದು ಕಂದಾಯ ಇಲಾಖೆ ಎಚ್ಚರಿಸಿದೆ. ಇಂತಹ ದಾರಿಗಳನ್ನು ಅತಿಕ್ರಮಿಸಿದರೆ ಸಂಬಂಧಪಟ್ಟ ತಹಶೀಲ್ದಾರ್‌ಗೆ ದೂರು ನೀಡಬಹುದಾಗಿದ್ದು, ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಲು ಅವಕಾಶವಿದೆ.
ಕಾನೂನು ಏನು ಹೇಳುತ್ತದೆ?
ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 59ರಂತೆ: ದಾರಿಯ ಹಕ್ಕುಗಳು ಮತ್ತು ಇತರ ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಜಮೀನಿನ ಮಾಲೀಕರು ಒಪ್ಪುವ ಸಂದರ್ಭದಲ್ಲಿ ಇಂತಹ ಹಕ್ಕುಗಳನ್ನು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.
ದಿ ಇಂಡಿಯನ್ ಅಸೆಸ್‌ಮೆಂಟ್ ಆಕ್ಟ್ 1882: ಈ ಕಾಯ್ದೆಯಡಿ ಪ್ರತಿಯೊಬ್ಬ ಜಮೀನಿನ ಮಾಲೀಕರು ತಮ್ಮ ಭೂಮಿಗೆ ಪ್ರವೇಶಿಸುವ ಮತ್ತು ವಹಿವಾಟು ನಡೆಸುವ ಹಕ್ಕನ್ನು ಹೊಂದಿರುತ್ತಾರೆ. ನೆರೆಹೊರೆಯವರು ಈ ಹಕ್ಕನ್ನು ಕಸಿದುಕೊಳ್ಳುವಂತಿಲ್ಲ.
ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 147: ಭೂಮಿ ಮತ್ತು ನೀರಿನ ಹಕ್ಕಿನ ಬಳಕೆಗೆ ಸಂಬಂಧಿಸಿದಂತೆ ಶಾಂತಿ ಭಂಗ ಉಂಟಾದಾಗ ಅದನ್ನು ನಿವಾರಿಸಲು ತಹಶೀಲ್ದಾರ್‌ಗೆ ಮ್ಯಾಜಿಸ್ಟ್ರೇಟ್ ಅಧಿಕಾರವಿರುತ್ತದೆ.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
ಬ್ರಿಟಿಷರ ಕಾಲದ ನಕ್ಷೆಯಲ್ಲಿರುವ ದಾರಿಗಳಿದ್ದರೂ ಹಲವೆಡೆ ಅವುಗಳನ್ನು ಮುಚ್ಚಲಾಗುತ್ತಿದೆ. ಈ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳಿಗೆ ಸಾರ್ವಜನಿಕರು ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ದಾರಿಗಳನ್ನು ಸುಗಮಗೊಳಿಸುವಂತೆ 2023ರ ಅಕ್ಟೋಬರ್ 20ರಂದು ಕಂದಾಯ ಇಲಾಖೆ ಈಗಾಗಲೇ ಆದೇಶ ಹೊರಡಿಸಿದೆ.








