ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶಿಸಿ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವಂತ ಅವರು, ಆಧುನಿಕ ಕಾಲಘಟ್ಟದಲ್ಲಿ ಭಾಷಾಭಿಮಾನ ಎನ್ನುವುದು ನೇಪಥ್ಯಕ್ಕೆ ಸರಿಯುತ್ತಿರುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಠಿಯಿಂದ ಆರೋಗ್ಯಕರ ಬೆಳವಣಿಗೆ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಂಸ್ಥಿಕ ಪ್ರಯತ್ನಗಳು ಮಾತ್ರ ನಿರೀಕ್ಷಿತ ಪರಿಣಾಮವನ್ನು ದೊರಕಿಸಿ ಕೊಡುವುದಲ್ಲದೇ ರಾಜ್ಯಭಾಷೆಯ ಉಳಿವಿಗೆ ಮಹತ್ವದ ಕೊಡುಗೆಯನ್ನು ನೀಡುತ್ತವೆ. ಇತ್ತೀಚಿಗೆ ನಾನು ರಾಯಚೂರಿಗೆ ಕಾರ್ಯನಿಮಿತ್ತ ತೆರಳದ ಸಂದರ್ಭದಲ್ಲಿ ಜಿಲ್ಲೆಯ ವೈದ್ಯರು ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಬೇಕೆಂದು ಪ್ರೇರೇಪಿಸಿ ಅಲ್ಲಿನ ಜಿಲ್ಲಾಧಿಕಾರಿಯವರಿಗೆ ಈ ಕುರಿತಂತೆ ಅಗತ್ಯ ಸೂಚನೆಗಳನ್ನು ಹೊರಡಿಸಲು ನಿರ್ದೇಶನವನ್ನು ನೀಡಿದ್ದೆ ಎಂದಿದ್ದಾರೆ.
ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿ ನೂರಾರು ವೈದ್ಯರು ಸ್ವಯಂಪ್ರೇರಿತರಾಗಿ ತಾವು ಕನ್ನಡ ಭಾಷೆಯನ್ನು ಉಳಿಸಲು ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯುವ ಕೆಲಸವನ್ನು ಆರಂಭಿಸುತ್ತೇವೆ ಎಂದು ತಮ್ಮ ಭಾಷಾಭಿಮಾನವನ್ನು ನನ್ನಲ್ಲಿ ವ್ಯಕ್ತಪಡಿಸಿದ್ದಾರೆ. ಹಲವಾರು ಜನ ತಾವು ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ನನ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಪ್ರಾಧಿಕಾರದ ಅಧ್ಯಕ್ಷನಾಗಿ ನನಗೆ ರೋಮಾಂಚನಗೊಳುಸುವ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಈ ಪರಿಣಾಮಕಾರಿಯಾದ ಮಾನಸಿಕತೆಯ ಮೂಲಕ ಕನ್ನಡ ಭಾಷೆಗೆ ಒಂದು ಮಹತ್ವದ ಹಾದಿ ಇದೀಗ ತೆರೆದುಕೊಂಡಿದೆ ಎಂಬ ಅಭಿಪ್ರಾಯ ನನ್ನದಾಗಿದ್ದು, ಇದು ಸರ್ವವ್ಯಾಪಿಯಾಗಬೇಕಾದ ಅನಿವಾರ್ಯತೆ ಇರುತ್ತದೆ. ರಾಜ್ಯದ ಮೂಲೆಮೂಲೆಯಲ್ಲಿರುವ ಆರೋಗ್ಯ ಕೇಂದ್ರಗಳು ಸೇರಿದಂತೆ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ವೈದ್ಯರುಗಳು ತಾವು ಬರೆಯುವ ಔಷಧ ಚೀಟಿಯಲ್ಲಿ ಕನ್ನಡದ ಬಳಕೆಗೆ ಪ್ರಾಧಾನ್ಯತೆಯನ್ನು ನೀಡಿದಲ್ಲಿ ಕನ್ನಡ ಅಸ್ಮಿತೆಯನ್ನು ಉಳಿಸುವ ಮಹತ್ವದ ಹೆಜ್ಜೆಯಾಗುತ್ತದೆ ಎಂದಿದ್ದಾರೆ.
ಇದು ಕಡ್ಡಾಯವಾಗದೆ ಹೋದಲ್ಲಿ ಇದರ ಅನುಷ್ಠಾನವೂ ನಿರೀಕ್ಷಿತ ಪ್ರಗತಿಯನ್ನು ಹೊಂದುವುದು ಸಾಧ್ಯವಿರುವುದಿಲ್ಲ. ಇಲ್ಲಿ ರಾಜ್ಯ ಸರ್ಕಾರದ ದೃಢ ನಿಲುವು ತನ್ನದೆ ಪರಿಣಾಮವನ್ನು ಹೊಂದುವ ಕಾರಣ ತಾವು ಈ ನಿಟ್ಟಿನಲ್ಲಿ ವೈಯಕ್ತಿಕ ಗಮನ ಹರಿಸಿ ರಾಜ್ಯದ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಗಳು` ಕಡ್ಡಾಯವಾಗಿ ತಮ್ಮ ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆಯಲು ಸರ್ಕಾರದ ಆದೇಶವನ್ನು ಜಾರಿ ಮಾಡಬೇಕಾಗಿ ಈ ಮೂಲಕ ಕೋರುತ್ತೇನೆ. ಕನ್ನಡಪ್ರಿಯ ವೈದ್ಯರುಗಳನ್ನು, ಅವರ ಭಾಷಾ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅವರುಗಳನ್ನು ತಾಲೂಕು/ಜಿಲ್ಲೆ/ರಾಜ್ಯ ಹಂತದಲ್ಲಿ ಅಭಿನಂದಿಸುವ ಕೆಲಸವಾದರೆ ಮತ್ತಷ್ಟು ಉತ್ತಮ ಎಂಬ ಅಂಶವನ್ನು ಸಹ ನಿಮ್ಮಲ್ಲಿ ಹಂಚಿಕೊಳ್ಳ ಬಯಸುತ್ತೇನೆ ಎಂದು ಹೇಳಇದ್ದಾರೆ.
ಅದೇ ರೀತಿ ಖಾಸಗಿ ಆಸ್ಪತ್ರೆಗಳ ಕನ್ನಡಪ್ರಿಯ ವೈದ್ಯರಲ್ಲಿಯೂ, ಆಸ್ಪತ್ರೆಗಳ ಮುಖ್ಯಸ್ಥರಲ್ಲಿಯೂ ಕನ್ನಡ ಬಳಕೆಗೆ ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ವಾತಾವರಣವನ್ನು ಒದಗಿಸುತ್ತದೆ ಎಂಬ ಭರವಸೆಯನ್ನು ಸಹ ನೀವು ಸಾರ್ವಜನಿಕವಾಗಿ ನೀಡಿದಲ್ಲಿ ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಅತ್ಯಂತ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿಯೂ ತಮ್ಮ ಆದ್ಯ ಗಮನವನ್ನು ಹರಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿದ್ದಾರೆ.
ಅಂದಹಾಗೇ ಇಂದು ಬೆಳಿಗ್ಗೆಯಷ್ಟೇ ನಿಮ್ಮ ಕನ್ನಡ ನ್ಯೂಸ್ ನೌ ಕನ್ನಡದಲ್ಲೇ ಔಷಧಿ ಚೀಟಿ ಬರೆದು ಮಾದರಿಯಾದ ವೈದ್ಯರು! ಎಂಬುದಾಗಿ ಸುದ್ದಿಯನ್ನು ಪ್ರಕಟಿಸಿತ್ತು. ಈ ಸುದ್ದಿಯ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಪುರುಷೋತ್ತಮ ಬಿಳಿಮಲೆ ಅವರು ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಔಷಧಿ ಚೀಟಿಯನ್ನು ಕನ್ನಡದಲ್ಲೇ ಬರೆಯಲು ಆದೇಶಿಸುವಂತೆ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು