ಮಂಗಳೂರು : ರಾಜ್ಯದ ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್. ಮಾರುಕಟ್ಟೆಗೆ ನಕಲಿ ಅಡಿಕೆ ಬರುತ್ತಿದ್ದು, ಇದರಿಂದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗುವ ಆತಂಕ ಎದುರಾಗಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸುವಂತೆ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಎಚ್ಚರಿಕೆ ನೀಡಿದೆ.
ನಕಲಿ ಅಡಿಕೆಯೂ ವಿದೇಶಗಳಿಂದ ಭಾರತದ ಮಾರುಕಟ್ಟೆ ಪ್ರವೇಶಿಸತೊಡಗಿದೆ. ಅಡಿಕೆಯನ್ನೇ ಹೋಲುವಂತಹ ನಕಲಿ ಅಡಿಕೆ ಭಾರತದ ಮಾರುಕಟ್ಟೆಯಲ್ಲಿ ಸೇರಿಕೊಂಡಿರುವುದು ಬೆಳೆಗಾರರಿಗೆ, ವ್ಯಾಪಾರಿಗಳಿಗೆ ಹಾಗೂ ಗ್ರಾಹಕರೆಲ್ಲರಲ್ಲೂ ತಲೆನೋವು ಸೃಷ್ಟಿಸಬಹುದು.
ಪಶ್ಚಿಮ ಬಂಗಾಲದಲ್ಲಿ ಲಾರಿಯಲ್ಲಿ ಸಾಗಾಟ ಮಾಡುವಾಗ ಈ ಅಡಿಕೆ ಪತ್ತೆಯಾಗಿದೆ. ಸುಮಾರು 950 ಕಿಲೋ ಅಡಿಕೆಯನ್ನು ಕಸ್ಟಂಸ್ ಪ್ರಿವೆಂಟಿವ್ ಯುನಿಟ್‌ನವರು ಪತ್ತೆ ಮಾಡಿದ್ದು, ಅದರ ಗುಣಮಟ್ಟ ಪರಿಶೀಲನೆಗೆ ಮಾದರಿಯನ್ನು ಮಂಗಳೂರಿನ ಅಡಿಕೆ ಸಂಶೋಧನ ಪ್ರತಿಷ್ಠಾನಕ್ಕೆ ಕಳುಹಿಸಿದ್ದಾರೆ. ಇದರ ಗುಣಮಟ್ಟ ಪರಿಶೀಲನೆಗೆ ತೊಡಗಿಸಿ ಕೊಂಡಾಗ ತಜ್ಞರಿಗೆ ಇದು ನಿಜವಾದ ಅಡಿಕೆಯಲ್ಲ, ಅದನ್ನೇ ಹೋಲುವಂತಹ ನಕಲಿ ಅಡಿಕೆ ಎನ್ನುವುದು ಗೊತ್ತಾಗಿದೆ.
ಅಡಿಕೆಗೆ ಕಂದು ರೀತಿಯ ಒಳಭಾಗದ ವಿಶಿಷ್ಟ ರಚನೆ ಇಲ್ಲ, ಒಳಭಾಗ ಪೂರ್ತಿ ಬಿಳಿ ಬಣ್ಣ ಇದೆ ಹಾಗೂ ದೊರಗು ರಚನೆ ಇಲ್ಲ, ಅಡಿಕೆ ಒಳಗೆ ಮಧ್ಯ ಭಾಗ ತಿರುಳೂ ಇಲ್ಲ. ಹೊರಭಾಗಕ್ಕೆ ಅಡಿಕೆ ಚೊಗರಿನಿಂದ ಮುಳುಗಿಸಿ ಒಣಗಿಸಿದ ಹಾಗಿದೆ. ಮೇಲ್ನೋಟಕ್ಕೆ ಇದು ಕೆಂಪಡಿಕೆಯನ್ನೇ ಹೋಲುತ್ತದೆ, ಆದರೆ ಅಡಿಕೆಗಿಂತ ಗಟ್ಟಿಯಾಗಿದೆ. ಹೀಗಾಗಿ ಅಡಿಕೆ ವರ್ತಕರು, ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಇಂತಹ ಬೆಳವಣಿಗೆಯಿಂದ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತವಾಗುವ ಆತಂಕ ಎದುರಾಗಿದೆ.