ಬೆಂಗಳೂರು : ಬಿಪಿಎಲ್ ಸೇರಿದಂತೆ ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಸದ್ಯಕ್ಕೆ ಹೊಸ ಪಡಿತರ ಚೀಟಿ ಹಂಚಿಕೆ ಮಾಡಲ್ಲ ಎಂದು ಆಹಾರ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಸುಮಾರು 2.94 ಲಕ್ಷ ಮಂದಿ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಆದರೆ ಹೊಸ ಅರ್ಜಿದಾರರರಿಗೆ ಅವಕಾಶವಿಲ್ಲ ಎನ್ನುತ್ತಿದೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮೊದಲು ಸ್ಥಗಿತಗೊಳಿಸಿದ್ದ ಪೋರ್ಟಲ್ ಅನ್ನು ಈವರೆಗೂ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮುಕ್ತಗೊಳಿಸಿಲ್ಲ. ಆದರೆ, ಆರೋಗ್ಯ ತುರ್ತು ಇರುವವರಿಗೆ ಹಾಗೂ ಕಾರ್ಮಿಕರಿಗೆ ಮಾತ್ರ ವೆಬ್‌ಸೈಟ್ ತೆರೆದುಕೊಳ್ಳುತ್ತದೆ. ಬಂದ ಅರ್ಜಿಗಳನ್ನು ಆಯಾ ಜಿಲ್ಲೆಗಳ ಉಪನಿರ್ದೇಶಕರ ಶಿಫಾರಸಿನ ಮೇರೆಗೆ ಆಹಾರ ಇಲಾಖೆಯ ಆಯುಕ್ತರು ಅನುಮೋದನೆ ನೀಡಲಿದ್ದಾರೆ.
ಬಿಪಿಎಲ್ ಕಾರ್ಡ್‌ಗಳನ್ನು ನೀಡುವುದಿಲ್ಲ. ಆದರೆ, ತುರ್ತು ಆರೋಗ್ಯ ಸಮಸ್ಯೆಯುಳ್ಳವರಿಗೆ ಮಾತ್ರ ಅಗತ್ಯತೆ ಪರಿಶೀಲಿಸಿ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.