ಬೆಂಗಳೂರು : ಈ ವರ್ಷದ ಆರಂಭದಲ್ಲಿ ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ನೀಡಿತ್ತು. ಕೆಎಸ್ಆರ್ಟಿಸಿ ಬಸ್ ಪ್ರಯಾಣದ ಟಿಕೆಟ್ ದರ ಹೆಚ್ಚಳ ಮಾಡಿತ್ತು. ಅದಾದ ಬಳಿಕ ಮೆಟ್ರೋ ಪ್ರಯಾಣದ ಟಿಕೆಟ್ ದರ ಕೂಡ ಹೆಚ್ಚಳ ಮಾಡಿ ಜನತೆಯ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿತ್ತು. ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಏಪ್ರಿಲ್ 1 ರಿಂದ ಆಟೋ ಪ್ರಯಾಣದ ದರ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ನಗರದಲ್ಲಿನ ಆಟೋರಿಕ್ಷಾ ಚಾಲಕರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸಿ, ಬೆಂಗಳೂರು ನಗರ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಬುಧವಾರ ಸಭೆ ಕರೆದು, ಸಂಭಾವ್ಯ ದರ ಪರಿಷ್ಕರಣೆ ಕುರಿತು ಚರ್ಚಿಸಿದೆ. ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ, ಪ್ರಸ್ತುತ ಕನಿಷ್ಠ ದರ 30 ರೂ.ಗಳಾಗಿದ್ದು, ಎರಡು ಕಿಲೋಮೀಟರ್‌ಗಿಂತ ಹೆಚ್ಚಿನ ದೂರಕ್ಕೆ ಪ್ರತಿ ಕಿಲೋಮೀಟರ್‌ಗೆ 15 ರೂ.ಗಳ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ.
ಆಟೋ ದರ ಏರಿಕೆ ಮಾಡುವಂತೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿಯಿದೆ. 3-4 ವರ್ಷದಿಂದ ಆಟೋ ದರ ಏರಿಕೆಗೆ ಆಗ್ರಹಿಸಿ ಹೋರಾಟ ನಡೆಯುತ್ತವೇ ಇದ್ದು, ಆಟೋ ಚಾಲಕರ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಅಸ್ತು ಎಂದಿದೆ. ಏಪ್ರಿಲ್ 1 ರಿಂದ ಅಧಿಕೃತವಾಗಿ ಪರಿಷ್ಕೃತ ಪಟ್ಟಿ ಜಾರಿಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಕನಿಷ್ಟ ದರ 30 ರೂ. ಇದ್ದು. ನಂತರದ ಪ್ರತಿ ಕಿ.ಮೀ ಗೆ 15 ರೂ. ಇದೆ. ಪರಿಷ್ಕೃತ ದರ ಪಟ್ಟಿ ಪ್ರಕಾರ ಮಿನಿಮಂ ಚಾರ್ಜ್ 40 ರೂ. ಆಗಲಿದ್ದು, ನಂತರದ ಪ್ರತಿ ಕಿ.ಮೀ.ಗೆ ದರ 20 ರೂ. ಏರಿಕೆಯಾಗಲಿದೆ.