ಬೆಂಗಳೂರು: ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್, ರಾಜ್ಯದ ಹಲವು ಖಾಸಗಿ ಶಾಲೆಗಳಲ್ಲಿ ಶುಲ್ಕ ಏಕಾಏಕಿ ಹೆಚ್ಚಳ ಮಾಡಲಾಗಿದೆ.
ಅನುದಾನ ರಹಿತ ಶಾಲೆಗಳಲ್ಲಿ ಶೇಕಡ 15 ರಿಂದ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಪೋಷಕರಿಗೆ ಹೆಚ್ಚಿನ ಶುಲ್ಕದ ಹೊರೆ ಬಿದ್ದಿದೆ. ಪ್ರತಿವರ್ಷ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಡೀಸೆಲ್ ಬೆಲೆ ಏರಿಕೆ ಮೊದಲಾದ ಕಾರಣಗಳಿಂದ ಪ್ರವೇಶ ಶುಲ್ಕದಲ್ಲಿ 15 ರಿಂದ 20 ರಷ್ಟು ಹೆಚ್ಚಳ ಮಾಡುವುದಾಗಿ ಖಾಸಗಿ ಶಾಲೆಗಳು ಪ್ರಕಟಿಸಿವೆ.
ರಾಜ್ಯ ಸರ್ಕಾರ ಡೀಸೆಲ್ ಬೆಲೆ ಹೆಚ್ಚಿಸಿದೆ. ವಾಹನಗಳ ವಿಮಾ ಮೊತ್ತ ಹೆಚ್ಚಾಗಿದೆ. ಶಿಕ್ಷಣ ಸಂಸ್ಥೆಗಳಿಗೂ ಕಸದ ತೆರಿಗೆ ಹಾಕಲಾಗುತ್ತಿದ್ದು, ನೀರಿನ ದರ ಹೆಚ್ಚಳ ಮಾಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳಿಗೆ ವಾಣಿಜ್ಯ ಉದ್ಯಮಗಳಿಗೆ ಇರುವ ದರದಲ್ಲಿ ತೆರಿಗೆ ವಸೂಲಿ ಮಾಡುತ್ತಿದ್ದು, ಶಾಲೆಗಳ ನಿರ್ವಹಣೆ, ಸಿಬ್ಬಂದಿ, ಶಿಕ್ಷಕರು, ಚಾಲಕರ ವೇತನ ಹೆಚ್ಚಳ ಕಾರಣದಿಂದ ಶುಲ್ಕ ಹೆಚ್ಚಳ ಅನಿವಾರ್ಯ ಎಂದು ಖಾಸಗಿ ಶಾಲೆಗಳ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದಾರೆ.
ಹೀಗಾಗಿ ಖಾಸಗಿ ಶಾಲೆಗಳ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಶಾಲಾ ಶುಲ್ಕವನ್ನು ಹೆಚ್ಚಳ ಮಾಡಿರುವುದೇ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.