ಬೆಂಗಳೂರು : ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಪೋಷಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶಾಲಾ ವಾಹನಗಳ ಶುಲ್ಕ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.
ಡೀಸೆಲ್ ದರ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳ ಶಾಲಾ ವಾಹನಗಳ ಶುಲ್ಕವನ್ನು 1000 ರೂ.ನಿಂದ 1,500 ರೂ.ವರೆಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಖಾಸಗಿ ಶಾಲಾ ವಾಹನಗಳ ಸಂಘದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ನೂತನ ದರ ಜಾರಿಗೆ ಬರುವ ಸಾಧ್ಯತೆ ಇದೆ.
ಇನ್ನು ಅನುದಾನ ರಹಿತ ಶಾಲೆಗಳಲ್ಲಿ ಶೇಕಡ 15 ರಿಂದ 20 ರಷ್ಟು ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಪೋಷಕರಿಗೆ ಹೆಚ್ಚಿನ ಶುಲ್ಕದ ಹೊರೆ ಬಿದ್ದಿದೆ. ಪ್ರತಿವರ್ಷ ಶಾಲೆಗಳಲ್ಲಿ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಡೀಸೆಲ್ ಬೆಲೆ ಏರಿಕೆ ಮೊದಲಾದ ಕಾರಣಗಳಿಂದ ಪ್ರವೇಶ ಶುಲ್ಕದಲ್ಲಿ 15 ರಿಂದ 20 ರಷ್ಟು ಹೆಚ್ಚಳ ಮಾಡುವುದಾಗಿ ಖಾಸಗಿ ಶಾಲೆಗಳು ಪ್ರಕಟಿಸಿವೆ.