ಬೆಂಗಳೂರು : ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬಿಗ್ ಶಾಕ್ ನೀಡಿದ್ದು, ಎತ್ತಿನಹೊಳೆ ಏತ ನೀರಾವರಿ ಯೋಜನೆ ಹಾಗೂ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ ಹಿಡಿದಿದೆ.
ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಯೋಜನೆಯ ಮೊದಲ ಹಂತ ದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂಥ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರೀ ಅನಾಹುತವಾಗಿದೆ ಎಂದು ಹೇಳಿರುವ ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿಯು, ಕೆಲಸಗಳನ್ನು ಆಳವಾಗಿ ಪರಿಶೀಲಿಸದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಿದೆ.
ಇನ್ನು ರಾಜ್ಯ ಸರ್ಕಾರದ ಉದ್ದೇಶಿತ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಾಗಿ ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಸುಮಾರು 54 ಹೆಕ್ಟೇರ್ಅರಣ್ಯ ಭೂಮಿ ಯನ್ನು ಬಳಸುವ ಕರ್ನಾಟಕ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿದೆ.
ಏನಿದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ? ವಿರೋಧ ಏಕೆ?
ಪಂಪ್ಡ್ ಸ್ಟೋರೇಜ್ ಯೋಜನೆಯು ವಿಶ್ವದ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನ ಎಂದೇ ಪರಿಗಣಿಸಲಾಗಿದ್ದು, ಎರಡು ಜಲಾಶಯಗಳ ನಡುವೆ ಇದನ್ನು ಕಾರ‍್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಲಭ್ಯವಿದ್ದಾಗ, ಕೆಳಗಿನ ಜಲಾಶಯದ ನೀರನ್ನು ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಸಂಗ್ರಹಿಸಲಾಗುತ್ತದೆ ಮತ್ತು ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ಸಂಗ್ರಹಿಸಿದ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಗ್ರಿಡ್‌ಗೆ ಪೂರೈಸಲಾಗುತ್ತದೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಈ ತಂತ್ರಜ್ಞಾನವನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ (ತಳಕಳಲೆ ಮತ್ತು ಗೇರುಸೊಪ್ಪ ನಡುವೆ) ಅಳವಡಿಸಲು ಹೊರಟಿದ್ದು, ಇದರ ಮೂಲಕ 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. 10,500 ಕೋಟಿ ರೂ. ವೆಚ್ಚದ ಈ ಯೋಜನೆಗೆ ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫಾಸ್ಟ್ರಕ್ಚರ್ಸ್ ಸಂಸ್ಥೆಗೆ ಕಳೆದ ಫೆಬ್ರವರಿಯಲ್ಲಿ 8005 ಕೋಟಿ ರೂ.ಗಳ ಟೆಂಡರ್ ನೀಡಲಾಗಿತ್ತು. ಇದೀಗ ಈ ಯೋಜನೆಗೆ ಕೇಂದ್ರ ಸರ್ಕಾರ ಪರಿಸರಕ್ಕೆ ಹಾನಿಯ ಹಿನ್ನಲೆಯಲ್ಲಿ ತಡೆ ನೀಡಿದೆ.








