ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದ್ದು, ಇದರ ಬೆನ್ನಲ್ಲೇ ಮದ್ಯಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಅಗ್ಗದ ಮದ್ಯ (Cheap Liquor) ಸೇವಿಸುವವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡುವ ಲಕ್ಷಣಗಳು ದಟ್ಟವಾಗಿವೆ. ನಾಳೆಯ 2026-27ನೇ ಸಾಲಿನ ಬಜೆಟ್ನಲ್ಲಿ ಅಗ್ಗದ ಮದ್ಯದ ಬೆಲೆಯನ್ನು ಶೇಕಡಾ 12ರಷ್ಟು ಹೆಚ್ಚಳ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಬೆಲೆ ಏರಿಕೆಗೆ ಪ್ರಮುಖ ಕಾರಣವೇನು?
ರಾಜ್ಯದಲ್ಲಿ ಇತ್ತೀಚೆಗೆ ಮದ್ಯದ ವಹಿವಾಟು ಗಣನೀಯವಾಗಿ ಕುಸಿತ ಕಂಡಿದೆ. ಇಂಡಿಯನ್ ಮೇಡ್ ಲಿಕ್ಕರ್ (IML) ವಹಿವಾಟಿನಲ್ಲಿ ಶೇ. 4.02ರಷ್ಟು ಹಾಗೂ ಬಿಯರ್ ವಹಿವಾಟಿನಲ್ಲಿ ಬರೋಬ್ಬರಿ ಶೇ. 54.92ರಷ್ಟು ಇಳಿಕೆಯಾಗಿದೆ. ವಹಿವಾಟು ಕುಸಿತದ ನಡುವೆಯೂ, ಅಬಕಾರಿ ಇಲಾಖೆಯು 2026-27ನೇ ಹಣಕಾಸು ವರ್ಷಕ್ಕೆ ತನ್ನ ಆದಾಯ ಸಂಗ್ರಹಣೆ ಗುರಿಯನ್ನು ಶೇ. 10ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಲೆಕ್ಕಾಚಾರದಂತೆ ಅಬಕಾರಿ ಇಲಾಖೆಯ ಆದಾಯ ಸಂಗ್ರಹಣೆಯ ಗುರಿಯು ಸುಮಾರು 4,300 ಕೋಟಿ ರೂ.ಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ನೀಡಲಾಗಿದ್ದ ಬೃಹತ್ ಗುರಿಯನ್ನು ತಲುಪಲು ಇಲಾಖೆ ಹೆಣಗಾಡುತ್ತಿದ್ದು, ಈ ಬಾರಿಯ ಹೊಸ ಗುರಿಯನ್ನು ಮುಟ್ಟಲು ಮದ್ಯದ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂಬ ನಿಲುವಿಗೆ ಸರ್ಕಾರ ಬಂದಿದೆ ಎನ್ನಲಾಗಿದೆ.
ಬಡ ಮತ್ತು ಮಧ್ಯಮ ವರ್ಗಕ್ಕೆ ನೇರ ಹೊಡೆತ:
ಸಾಮಾನ್ಯವಾಗಿ ಅಗ್ಗದ ಮದ್ಯವನ್ನು ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ಖರೀದಿಸುತ್ತಾರೆ. ಇದೀಗ ಇವುಗಳ ಮೇಲೆಯೇ ಶೇ. 12ರಷ್ಟು ದರ ಹೆಚ್ಚಳ ಮಾಡಲು ಮುಂದಾಗಿರುವುದು 90 ML ಪ್ರಿಯರ ಜೇಬಿಗೆ ನೇರವಾಗಿ ಕತ್ತರಿ ಹಾಕಿದಂತಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಈ ಮದ್ಯದ ದರ ಏರಿಕೆಯು ಮತ್ತೊಂದು ಹೊರೆಯಾಗಲಿದೆ.
ವರದಿಗಳ ಪ್ರಕಾರ, ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಅಬಕಾರಿ ಇಲಾಖೆಗೆ ಕೇವಲ ಹೆಚ್ಚುವರಿ ಆದಾಯ ಸಂಗ್ರಹಣೆಯ ಗುರಿಯನ್ನು ಮಾತ್ರ ಘೋಷಿಸುವ ಸಾಧ್ಯತೆಯಿದ್ದು, ಬಜೆಟ್ ಅಧಿವೇಶನದ ಬಳಿಕ ಅಧಿಕೃತವಾಗಿ ಮದ್ಯದ ದರ ಏರಿಕೆಯ ಆದೇಶ ಹೊರಬೀಳುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಈ ಬಾರಿಯ ರಾಜ್ಯ ಬಜೆಟ್ ಮದ್ಯಪ್ರಿಯರ ಪಾಲಿಗೆ ದುಬಾರಿಯಾಗುವುದು ಬಹುತೇಕ ಖಚಿತವಾಗಿದೆ.








