ನೈಸರ್ಗಿಕ ವಿಕೋಪಗಳಾದ ಅತೀವೃಷ್ಟಿ, ಪ್ರವಾಹ, ಬರ ಪರಿಸ್ಥಿತಿ, ಆಲಿಕಲ್ಲು ಮಳೆಯಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಅರ್ಹ ಸಾರ್ವಜನಿಕರಿಗೆ, ರೈತ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಬರ ಪರಿಹಾರದ ಮೊತ್ತವನ್ನು ರೈತರಿಗೆ ಬರ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆದರೆ, ಕೆಲ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರ, ರೈತರ ಪರಿಹಾರದ ಮೊತ್ತವನ್ನು ಅವರ ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ಸಾರ್ವಜನಿಕರು, ರೈತರು ತಿಳಿಸಿರುತ್ತಾರೆ.
ಪ್ರಯುಕ್ತ ಧಾರವಾಡ ಜಿಲ್ಲೆಯಲ್ಲಿನ ರೈತರ ಬ್ಯಾಂಕ್ ಖಾತೆಗಳಿಗೆ ಬರ, ಅತೀವೃಷ್ಟಿ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳ ಪರಿಹಾರದ ಮೊತ್ತವು ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ ಮೂಲಕ ಸಂದಾಯವಾಗುತ್ತದೆ. ಸದರ ಮೊತ್ತವನ್ನು ಯಾವುದೇ ಕಾರಣಕ್ಕಾಗಿ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಲ್ಲ ಬ್ಯಾಂಕ್ಗಂಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದ್ದಾರೆ.
ಈ ಕುರಿತು ಜಿಲ್ಲೆಯ ಎಲ್ಲ ಬ್ಯಾಂಕುಗಳು ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮತ್ತು ಶಾಖಾ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ರೈತರಿಗೆ ತೊಂದರೆ ಆಗದಂತೆ ಮತ್ತು ಪರಿಹಾರ ಮೊತ್ತವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.








