ಬೆಂಗಳೂರು: ಪಿಂಚಣಿ ಹಣವನ್ನು ಸಾಲದ ಮರುಪಾವತಿಗೆ ಸಂದಾಯ ಮಾಡಿಕೊಂಡರೆ ಅದು ಸಂವಿಧಾನದ 21ನೇ ವಿಧಿಯ ಬದುಕುವ ಹಕ್ಕು ಉಲ್ಲಂಘನೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬ್ಯಾಂಕ್ ನೌಕರರ ಪಿಂಚಣಿಯ ಶೇಕಡ 50ಕ್ಕಿಂತ ಹೆಚ್ಚಿನ ಹಣವನ್ನು ಅವರ ಸಾಲದ ಮರುಪಾವತಿಗೆ ಕಡಿತಗೊಳಿಸುವುದು ಸರಿಯಲ್ಲ ಎಂದು ಆದೇಶಿಸಿದೆ.
ಬ್ಯಾಂಕ್ ನಿವೃತ್ತ ನೌಕರನ ಪಿಂಚಣಿಯ ಶೇ.50ಕ್ಕಿಂತ ಅಧಿಕ ಹಣವನ್ನು ಸಾಲದ ಮರುಪಾವತಿಗಾಗಿ ಕಡಿತಗೊಳಿಸುವಂತಿಲ್ಲ ಎಂದು ಬ್ಯಾಂಕ್‌ಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ಸಾಲದ ಬಾಕಿ ಮೊತ್ತವನ್ನು ಬಡ್ಡಿಯೊಂದಿಗೆ ವಸೂಲಿ ಮಾಡಲು ಕಾನೂನಿನೊಳಗಿನ ಇತರ ವಿಧಾನವನ್ನು ಅನುಸರಿಸಲು ಬ್ಯಾಂಕ್ ಮುಕ್ತವಾಗಿದೆ ಎಂದು ಹೇಳಿದೆ.
ಬ್ಯಾಂಕ್ ತಮ್ಮ ಸಂಪೂರ್ಣ ಪಿಂಚಣಿ ಮೊತ್ತವನ್ನು ಸಾಲದ ಕಂತುಗಳಾಗಿ ಕಡಿತಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಕೇರಳದ ನಿವೃತ್ತ ಉದ್ಯೋಗಿ ಒ.ಕೆ.ಮುರುಗನ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಪಿಂಚಣಿಯ ಶೇ.50ಕ್ಕಿಂತ ಅಧಿಕ ಸಂಬಳವನ್ನು ಕಡಿತಗೊಳಿಸಬಾರದೆಂಬ ನಿಯಮವಿದೆ. ಇದು ಈ ಪ್ರಕರಣದಲ್ಲೂ ಅನ್ವಯಿಸಬೇಕು. ಸಂಪೂರ್ಣ ಪಿಂಚಣಿಯನ್ನು ಸಾಲದ ಬಾಕಿಗಳಿಗೆ ವಸೂಲಿ ಮಾಡಲು ಅನುಮತಿಸಿದರೆ, ಅದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಹಾಗೆ ಮಾಡಿದರೆ ಅದು ಪಿಂಚಣಿ ಪಾವತಿಯ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.