ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ತಮ್ಮ ಸ್ಯಾಲರಿ ಅಕೌಂಟ್ ಅನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಆಗಿ ಪರಿವರ್ತಿಸಬೇಕು ಹಾಗೂ ಆ್ಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ.
ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮತ್ತು ಅವಲಂಬಿತ ಕುಟುಂಬ ಸದಸ್ಯರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಕೆಲ ಅಂಶಗಳಲ್ಲಿ ಆದೇಶಿಸಲಾಗಿದ್ದು, ವಿವಿಧ ಬ್ಯಾಂಕುಗಳು ಒದಗಿಸುವ “ಸಂಬಳ ಪ್ಯಾಕೇಜ್‌ಗಳ” ಅಡಿಯಲ್ಲಿ ಖಾತೆಗಳನ್ನು ತೆರೆಯುವುದು, ಆಯ್ಕೆ ಮಾಡಿಕೊಳ್ಳುವುದನ್ನು ಎಲ್ಲಾ ಅಧಿಕಾರಿ, ನೌಕರರಿಗೆ (ಸರ್ಕಾರಿ, ಸರ್ಕಾರಿ ಸಂಸ್ಥೆಗಳು, ಇತ್ಯಾದಿ) ಈ ಆದೇಶದಲ್ಲಿ ಕಡ್ಡಾಯಗೊಳಿಸಿದೆ. ಅಧಿಕಾರಿ ಮತ್ತು ನೌಕರರ ಸಾಮಾಜಿಕ ಭದ್ರತೆ ಹಿತದೃಷ್ಠಿಯಿಂದ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ನೀಡುವ ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ, ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸಬೇಕು. ಬ್ಯಾಂಕ್‌ಗಳು ನೀಡುವ ವಿವಿಧ ಯೋಜನೆಗಳ ಅಡಿಯಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಲು ಅಧಿಕಾರಿ, ನೌಕರರನ್ನು ಸಂಬಂಧಪಟ್ಟ ಇಲಾಖೆ ಪ್ರೋತ್ಸಾಹಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರದ ಆದೇಶದನ್ವಯ ಜಿಲ್ಲಾ ಸಂಸ್ಥೆಗಳು ಮತ್ತು ಇಲಾಖೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕಡ್ಡಾಯವಾಗಿ ತಮ್ಮ ಸ್ಯಾಲರಿ ಅಕೌಂಟ್ (Salary Account) ಅನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ (Salary Package Account) ಗೆ ಪರಿವರ್ತಿಸಲು ಮತ್ತು ತಮ್ಮ ಸಂಬಳ ಖಾತೆಯ ಬ್ಯಾಂಕ್‌ಗಳ ಮೂಲಕ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿರುವ ಆ್ಯಕ್ಸಿಡೆಂಟಲ್ (Accidental) ಮತ್ತು ಟರ್ಮ್ ಇನ್ಸೂರೆನ್ಸ್ (Term Insurance) ಯೋಜನೆಯಡಿ ನೊಂದಾಯಿಸಲು ಪ್ರೇರೇಪಿಸಲು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ನಿರ್ದೇಶಿಸಿರುತ್ತಾರೆ.
ಆದ್ದರಿಂದ ಎಲ್ಲಾ ಇಲಾಖೆಗಳ ಮುಖ್ಯಸ್ಥರು ತಮ್ಮ ಕಚೇರಿ ಹಾಗೂ ತಮ್ಮ ಅಧೀನ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಸ್ಯಾಲರಿ ಅಕೌಂಟ್ ಅನ್ನು ಸ್ಯಾಲರಿ ಪ್ಯಾಕೇಜ್ ಅಕೌಂಟ್ ಗೆ ಪರಿವರ್ತಿಸಲು ಕ್ರಮಕೈಗೊಳ್ಳಲು ಮತ್ತು ಸಂಬಳ ಖಾತೆಯ ಬ್ಯಾಂಕ್‌ಗಳ ಮೂಲಕ ಸರ್ಕಾರದ ಆದೇಶದಲ್ಲಿ ತಿಳಿಸಿರುವ ಹಾಗೂ ಆ್ಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರೇರೇಪಿಸಬೇಕು. ಈ ವಿಷಯವನ್ನು ಅತ್ಯಂತ ಜರೂರು ಎಂದು ಪರಿಗಣಿಸಿ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಪ್ರಕಟಣೆ ತಿಳಿಸಿದೆ.